MS Dhoni | ಅಥರ್ವ ಅವತಾರ ಎತ್ತಿದ್ದೇಕೆ ಧೋನಿ..?
ಟೀಂ ಇಂಡಿಯಾದ ದಿಗ್ಗಜ ಎಂಎಸ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಧೋನಿ ಉತ್ತಮ ಮೈಕಟ್ಟು ಹೊಂದಿದ್ದಾರೆ.
ಅಂತಹ ಧೋನಿ ಈ ಬಾರಿ ದೇಹವನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ. ಜೊತೆಗೆ ಉದ್ದನೆಯ ಕೂದಲು.. ಕೈಯಲ್ಲಿ ಕತ್ತಿ ಹಿಡಿದು ಯುದ್ಧದಲ್ಲಿ ಶತ್ರುಗಳ ಮೇಲೆ ದಾಳಿ ಮಾಡಲು ಸಿದ್ಧರಾಗಿದ್ದಾರೆ.
ಇದೇನು ಧೋನಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರಾ ಅನ್ನುವ ಅನುಮಾನ ಬೇಡ.
ಯಾಕಂದರೇ ಅನಿಮೇಟೆಡ್ ಗ್ರಾಫಿಕ್ಸ್ ಕಾದಂಬರಿಗಾಗಿ ಧೋನಿ ವಾರಿಯರ್ ಅವತಾರವೆತ್ತಿದ್ದಾರೆ.
ಮುಂಬರುವ ಅಥರ್ವ ಕಾದಂಬರಿಯ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದರಲ್ಲಿ ಅಥರ್ವ ಎಂಬ ಸೂಪರ್ ಹೀರೋ ಪಾತ್ರದಲ್ಲಿ ಮಿಂಚುತ್ತಿರುವ ಧೋನಿ ತಮ್ಮ ಲುಕ್ ನಿಂದಲೇ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಕಾದಂಬರಿಯನ್ನು ರಮೇಶ್ ತಮಿಳುಮಣಿ ಬರೆದಿದ್ದಾರೆ.
ಮೋಷನ್ ಪೋಸ್ಟರ್ನ ಟೀಸರ್ ಅನ್ನು ಸ್ವತಃ ಧೋನಿ ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಅಥರ್ವ ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗಿದೆ.
ಈ ಯೋಜನೆಯ ಭಾಗವಾಗಿರುವುದ ದೊಡ್ಡ ಅವಕಾಶ ಎಂದು ನಾನು ಭಾವಿಸಿದ್ದೇನೆ. ಕಾಮಿಕ್ ಪ್ರಿಯರಿಗೆ ಇದೊಂದು ದೊಡ್ಡ ಹಬ್ಬದಂತೆ ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.









