ಮದ್ದೂರು: “ಅವನಿಗೆ ಅಪ್ಪಿತಪ್ಪಿ ಸಿಂಹ ಎಂದು ಹೆಸರಿಟ್ಟಿದ್ದಾರೆ, ಅದಕ್ಕೆ ಬದಲು ‘ನಾಯಿ’ ಎಂದು ಹೆಸರಿಡಬೇಕಿತ್ತು. ಅವನೊಬ್ಬ ಕಚ್ಚೆಹರುಕ, ಆತನ ನಡತೆ ಸರಿಯಿಲ್ಲವೆಂದು ಸ್ವತಃ ಬಿಜೆಪಿಯವರೇ ಟಿಕೆಟ್ ಕೊಡದೆ ಮನೆಯಲ್ಲಿ ಕೂರಿಸಿದ್ದಾರೆ,” ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮದ್ದೂರು ಶಾಸಕ ಕೆ.ಎಂ. ಉದಯ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉದಯ್, ಬಿಜೆಪಿ ನಾಯಕರಾದ ಪ್ರತಾಪ್ ಸಿಂಹ, ಬಿ.ವೈ. ವಿಜಯೇಂದ್ರ ಹಾಗೂ ಸಿ.ಟಿ. ರವಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.
“ಮಂಡ್ಯವನ್ನು ಮಂಗಳೂರು ಮಾಡಲು ಸಂಚು”
ಪ್ರತಾಪ್ ಸಿಂಹನ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆತನ ಕಾಟ ಸಹಿಸಲಾಗದೆ ಸ್ವತಃ ಆತನ ಪತ್ನಿಯೇ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಇಂತಹ ವ್ಯಕ್ತಿ ಮಂಡ್ಯದ ಜನರಿಗೆ ತಿಳಿವಳಿಕೆ ಹೇಳಲು ಬರುತ್ತಾನೆ. ಮಂಡ್ಯವನ್ನು ಮಂಗಳೂರು ಮಾಡಲು ಇವರು ಹೊರಟಿದ್ದಾರೆ. ಅಲ್ಲಿ ಇವರ ಪ್ರಚೋದನೆಯಿಂದ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ, ಅದೇ ಪರಿಸ್ಥಿತಿಯನ್ನು ಇಲ್ಲಿಯೂ ಸೃಷ್ಟಿಸಲು ನೋಡುತ್ತಿದ್ದಾರೆ. ಆದರೆ, ಮಂಡ್ಯದ ಪ್ರಜ್ಞಾವಂತ ಜನರು ಇಂತಹ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ, ಎಂದು ಉದಯ್ ಕಿಡಿಕಾರಿದರು.
“ಕಲ್ಲು ತೂರಿದವರಿಗೆ ಕ್ಷಮೆ ಇಲ್ಲ”
ಗಣೇಶಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ಕ್ಷಮೆಯೇ ಇಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ. ಆದರೆ, ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ನಾವು ಖಂಡಿಸುತ್ತೇವೆ. ಎಲ್ಲಿಂದಲೋ ಬಂದು ಇಲ್ಲಿನ ಜನರ ನಡುವೆ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು, ಎಂದು ಅವರು ಎಚ್ಚರಿಕೆ ನೀಡಿದರು.
ವಿಜಯೇಂದ್ರ, ಸಿ.ಟಿ. ರವಿಗೂ ತಿರುಗೇಟು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಉದಯ್, “ನಾನು ಮೋಜು ಮಾಡಲು ವಿದೇಶಕ್ಕೆ ಹೋಗಿದ್ದೆ ಎನ್ನುತ್ತಾನೆ. ಅವನಪ್ಪನಿಗೆ ಅಧಿಕಾರ ಬರಲು ಯಾರು ಕಷ್ಟಪಟ್ಟರು ಎಂಬುದನ್ನು ಅಷ್ಟು ಬೇಗ ಮರೆತಿದ್ದಾನೆ. ಲಂಚ, ಪೋಕ್ಸೋ, ಅತ್ಯಾಚಾರ ಪ್ರಕರಣಗಳಲ್ಲಿ ಜೈಲಿಗೆ ಹೋದವರು ಯಾರು? ಇಂತಹವರು ಬಂದು ಮದ್ದೂರನ್ನು ಉದ್ದಾರ ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದರು.
ಇದೇ ವೇಳೆ, “ತೊಡೆ ಮುರಿಯುತ್ತೇನೆ, ಕತ್ತು ತೆಗೆಯುತ್ತೇನೆ ಎಂದು ಹೇಳುವ ಸಿ.ಟಿ. ರವಿ ಮೊದಲು ತಮ್ಮ ಮನೆಯ ತೂತನ್ನು ಸರಿಪಡಿಸಿಕೊಳ್ಳಲಿ. ಮಲೆನಾಡಿನಿಂದ ಬಂದವರಿಂದ ನಾವು ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ,” ಎಂದು ಅವರು ಸಿ.ಟಿ. ರವಿಗೆ ತಿರುಗೇಟು ನೀಡಿದರು.
ಇವರ ಸರ್ಕಾರ ಮದ್ದೂರಿಗೆ ಏನು ಕೊಡುಗೆ ನೀಡಿದೆ? ಹಿಂದೂಗಳಿಗಾಗಲಿ, ದೇವಸ್ಥಾನಗಳಿಗಾಗಲಿ ಏನು ಮಾಡಿದ್ದಾರೆ? ನಮ್ಮ ಸರ್ಕಾರದಲ್ಲಿ 1,500 ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇಂತಹ ಆಟಗಳನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಲಿ, ಎಂದು ಉದಯ್ ಸವಾಲು ಹಾಕಿದರು.








