ಮಧ್ಯಪ್ರದೇಶ ರಾಜ್ಯಪಾಲ ಲಾಲ್ಜಿ ಟಂಡನ್ ನಿಧನ
ಹೊಸದಿಲ್ಲಿ, ಜುಲೈ 21: ಮಧ್ಯಪ್ರದೇಶದ ಗವರ್ನರ್ ಲಾಲ್ಜಿ ಟಂಡನ್ (85) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ ಲಕ್ನೋದಲ್ಲಿ ನಿಧನರಾದರು. ಅವರ ಪುತ್ರ ಮತ್ತು ಯುಪಿ ಸಚಿವ ಅಶುತೋಷ್ ಟಂಡನ್ ಅವರ ನಿಧನದ ಸುದ್ದಿಯನ್ನು ದೃಢ ಪಡಿಸಿದರು. ಮೂತ್ರದ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದ ಲಾಲ್ಜಿ ಟಂಡನ್ ಅವರನ್ನು ಜೂನ್ 13 ರಂದು ಮೆಡಂತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಅವರು ಪಿತ್ತಜನಕಾಂಗ ಮತ್ತು ಮೂತ್ರಪಿಂಡದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ, ಲಾಲ್ಜಿ ಟಂಡನ್ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು.
ಲಾಲ್ಜಿ ಟಂಡನ್ ಅವರ ಪುತ್ರಅಶುತೋಷ್ ಟಂಡನ್ ಅವರ ನಿಧನದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ ಲಾಲ್ಜಿ ಟಂಡನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಮಾಜಕ್ಕೆ ಸೇವೆ ಸಲ್ಲಿಸಲು ಅವರು ಮಾಡಿದ ಸತತ ಪ್ರಯತ್ನಗಳಿಗಾಗಿ ಶ್ರೀ ಲಾಲ್ಜಿ ಟಂಡನ್ ಅವರನ್ನು ಸ್ಮರಿಸಲಾಗುವುದು. ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪರಿಣಾಮಕಾರಿ ಆಡಳಿತಗಾರರಾಗಿ ಛಾಪು ಮೂಡಿಸಿದರು, ಯಾವಾಗಲೂ ಸಾರ್ವಜನಿಕ ಕಲ್ಯಾಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು.

ಅವರ ನಿಧನದಿಂದ ದುಃಖಿತರಾಗಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಶ್ರೀ ಲಾಲ್ಜಿ ಟಂಡನ್ ಅವರು ಸಾಂವಿಧಾನಿಕ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಅವರು ಪ್ರೀತಿಯ ಅಟಲ್ ಜಿ ಅವರೊಂದಿಗೆ ಸುದೀರ್ಘ ಮತ್ತು ನಿಕಟ ಒಡನಾಟವನ್ನು ಹೊಂದಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ಟಂಡನ್ ಅವರ ಕುಟುಂಬ ಮತ್ತು ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ . ಓಂ ಶಾಂತಿ ಎಂದು ಅವರು ಹೇಳಿದ್ದಾರೆ.








