ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಬ್ರೇಕ್ ಬಿದ್ದಿದೆ ಎನ್ನುವಷ್ಟರಲ್ಲಿಯೇ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಎಲ್ಲವೂ ತಣ್ಣಗಾಗಿದೆ ಎನ್ನುವ ಹೊತ್ತಿನಲ್ಲೇ, ಮಹದೇವಪ್ಪ ಅವರು ಸಿಎಂ ಕುರ್ಚಿ ವಿಚಾರದಲ್ಲಿ ಸಿದ್ದರಾಮಯ್ಯನವರೇ ಅಚಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಗಟ್ಟಿಯಾಗಿದ್ದಾರೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಎನ್ನುವ ವಿಷಯವೇ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವಿರೋಧಿ ಪಾಳಯ ಹಾಗೂ ಸ್ವಪಕ್ಷೀಯ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಅನಗತ್ಯ ಊಹಾಪೋಹಗಳಿಗೆ ತೆರೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಎದ್ದಿರುವ ಊಹಾಪೋಹಗಳು ಅನಗತ್ಯ. ಪಕ್ಷದಲ್ಲಿ ಹಾಗೂ ಆಡಳಿತದಲ್ಲಿ ಯಾವುದೇ ಗೊಂದಲಗಳು ಇರಬಾರದು ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಮುಂದಿನ ಐದು ವರ್ಷಗಳ ಕಾಲ ಸುಭದ್ರವಾಗಿ ಸರ್ಕಾರ ನಡೆಸುತ್ತೇವೆ ಎಂದು ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕ್ರಿಕೆಟ್ ಆಡುವವರು ಮಾತ್ರ ಬ್ಯಾಟ್ ಬೀಸಬೇಕು
ರಾಜಕೀಯ ವಿದ್ಯಮಾನಗಳನ್ನು ಕ್ರಿಕೆಟ್ ಆಟಕ್ಕೆ ಹೋಲಿಸಿದ ಸಚಿವರು ಮಾರ್ಮಿಕವಾಗಿ ಮಾತನಾಡಿದ್ದಾರೆ. ಮೈದಾನದಲ್ಲಿ ಇಳಿದು ಆಡುವ 11 ಜನ ಆಟಗಾರರು ಮಾತ್ರ ಬ್ಯಾಟ್ ಬೀಸಬೇಕು. ಅದನ್ನು ಬಿಟ್ಟು ಮೈದಾನದ ಹೊರಗಿರುವವರು ಬ್ಯಾಟ್ ಬೀಸಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳುವ ಮೂಲಕ, ಸಚಿವ ಸಂಪುಟದ ಹೊರಗಿನವರು ಅಥವಾ ಅನ್ಯ ನಾಯಕರು ಸಿಎಂ ಸ್ಥಾನದ ಬಗ್ಗೆ ಮಾತನಾಡುವುದಕ್ಕೆ ಕಿಮ್ಮತ್ತಿಲ್ಲ ಎಂಬ ಅರ್ಥದಲ್ಲಿ ಚಾಟಿ ಬೀಸಿದರು.
ಸ್ವಾಮೀಜಿಗಳ ಮಾತಿಗಿಂತ ಹೈಕಮಾಂಡ್ ಅಂತಿಮ
ಇದೇ ವೇಳೆ ವಿವಿಧ ಮಠಾಧೀಶರು ಮತ್ತು ಸ್ವಾಮೀಜಿಗಳು ಸಿಎಂ ಸ್ಥಾನದ ಬಗ್ಗೆ ಅಥವಾ ಅಧಿಕಾರ ಹಂಚಿಕೆ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೂ ಮಹದೇವಪ್ಪ ಪ್ರತಿಕ್ರಿಯಿಸಿದರು. ಯಾರೇ ಸ್ವಾಮೀಜಿಗಳು ಧ್ವನಿ ಎತ್ತಿದರೂ ಅಥವಾ ಸಲಹೆ ನೀಡಿದರೂ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಸಂವಿಧಾನ ಮತ್ತು ಪಕ್ಷದ ಚೌಕಟ್ಟಿನಲ್ಲಿ ಆಡಳಿತ ನಡೆಯಲಿದ್ದು, 2028ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿಗೆ ತಿರುಗೇಟು
ಇನ್ನು ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಮೊದಲು ತಾವು ಯಾವ ರೀತಿ ಅಧಿಕಾರಕ್ಕೆ ಬಂದರು ಎಂಬುದನ್ನು ನೆನಪಿಸಿಕೊಳ್ಳಲಿ. ಅವರು ನೈತಿಕವಾಗಿ, ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದರಾ? ಆಪರೇಷನ್ ಕಮಲದ ಇತಿಹಾಸ ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನವೇ ನಮಗೆ ದಾರಿ ದೀಪ
ಕನ್ನೇರಿ ಶ್ರೀಗಳು ನೀಡಿರುವ ಹೇಳಿಕೆ ಅಥವಾ ಇತರೆ ಧಾರ್ಮಿಕ ಮುಖಂಡರ ಹೇಳಿಕೆಗಳ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಬಗ್ಗೆ ಮಾತ್ರ ತಿಳಿದಿದೆ. ಅದರಂತೆಯೇ ನಮ್ಮ ನಡೆ ಮತ್ತು ನುಡಿ ಇರುತ್ತದೆ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.
ಬ್ರೇಕ್‌ಫಾಸ್ಟ್ ಮೀಟಿಂಗ್ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ ಎನ್ನಲಾಗಿತ್ತಾದರೂ, ಮಹದೇವಪ್ಪ ಅವರ ಈ ಹೇಳಿಕೆ ಸಿದ್ದರಾಮಯ್ಯನವರ ಬಣದಲ್ಲಿ ಹೊಸ ಹುರುಪು ತುಂಬಿದ್ದು, ಸಿಎಂ ಕುರ್ಚಿ ಸಿದ್ದರಾಮಯ್ಯನವರಿಗೆ ಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ.








