ಬಾಂಗ್ಲಾದೇಶದಿಂದ ರೆಮ್ಡೆಸಿವಿರ್ ಔಷಧಿ ತರಿಸಿಕೊಂಡ ಮಹಾರಾಷ್ಟ್ರ
ಮುಂಬೈ, ಜೂನ್ 13: ಕೊರೋನಾ ಸೋಂಕಿನ ಹಾವಳಿಯಿಂದ ಕಂಗೆಟ್ಟಿರುವ ಮಹಾರಾಷ್ಟ್ರವು ಕೊರೊನಾ ವಿರುದ್ಧ ಹೋರಾಡಲು ತುರ್ತು ಪರಿಸ್ಥಿತಿಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗಿರುವ ರೆಮ್ಡೆಸಿವಿರ್ ಔಷಧವನ್ನು ಬಾಂಗ್ಲಾದೇಶ ದಿಂದ ತರಿಸಿಕೊಂಡಿದ್ದು ಪ್ರಯೋಗವನ್ನು ಆರಂಭಿಸಿದೆ. ಮಹಾರಾಷ್ಟ್ರದ ಕ್ಲಿನಿಕಲ್ ನಿರ್ವಹಣೆಯನ್ನು ಪರಿಶೀಲಿಸುವ ವೈದ್ಯರನ್ನು ಒಳಗೊಂಡ ಕೊವಿಡ್ 19 ಕಾರ್ಯಪಡೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊರೊನಾ ಚಿಕಿತ್ಸೆಗೆ ಈ ಔಷಧಿಯನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ 3 ಸಾವಿರ ಸ್ಯಾಂಪಲ್ಗಳು ಮಹಾರಾಷ್ಟ್ರಕ್ಕೆ ದೊರಕಿದ್ದು, 10 ಸಾವಿರ ಔಷಧವನ್ನು ನಂತರ ಕಳುಹಿಸಲಾಗುತ್ತದೆ. ಭಾರತದಲ್ಲಿ ಈ ಔಷಧ ಲಭ್ಯವಿಲ್ಲದ ಕಾರಣ ಬಾಂಗ್ಲಾದೇಶದಿಂದ ತರಿಸಲಾಗುತ್ತಿದ್ದು, ಇವುಗಳನ್ನು ಮಹಾರಾಷ್ಟ್ರದ 18 ವೈದ್ಯಕೀಯ ಕಾಲೇಜುಗಳಿಗೆ ವಿತರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮಿತಿಮೀರಿದ್ದು, ಈಗಾಗಲೇ ಕೊರೊನಾ ಪ್ರಕರಣಗಳು ಲಕ್ಷವನ್ನು ಸಮೀಪಿಸಿದೆ. ಜೊತೆಗೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಅವರು ಬಾಂಗ್ಲಾದೇಶದಿಂದ 10 ಸಾವಿರ ಬಾಟಲಿಗಳನ್ನು ತರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಡ ಜನರಿಗೆ ಮತ್ತು ತುರ್ತು ಸ್ಥಿತಿಯಲ್ಲಿರುವವರಿಗೆ ಕೈಗೆಟುಕುವ ದರದಲ್ಲಿ ಈ ಔಷಧವನ್ನು ನೀಡಲಾಗುವುದು ಎಂದು ಹೇಳಿದ ಅವರು ಯಾರಿಗೆ ಕೃತಕ ಉಸಿರಾಟದ ಅಗತ್ಯವಿರುತ್ತದೆಯೋ ಅಂತಹವರಿಗೆ ಇದು ಹೆಚ್ಚಿನ ಪರಿಣಾಮಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆ ಕೂಡ ರೆಮ್ಡೆಸಿವಿರ್ ಔಷಧ ಕೊರೊನ ಸೋಂಕಿಗೆ ಪರಿಣಾಮಕಾರಿ ಎಂದು ಮಾಹಿತಿ ನೀಡಿದೆ.