ಮುಂಬೈ : ವಾಣಿಜ್ಯ ನಗರಿ ಮುಂಬೈಯಲ್ಲಿ ಕೊರೊನಾಸುರ ಆರ್ಭಟ ಕಡಿಮೆ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೇ ಮುಂಬೈಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ ಇನ್ನಷ್ಟು ಪ್ರಕರಣಗಳು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ಹೋರಾಟಕ್ಕೆ ಕೇರಳ ಸರ್ಕಾರ ಸಹಾಯ ಕೇಳಿದೆ. ಇದೆ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ತೋಪೆ ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್ ಅವರ ಜೊತೆಗೆ ಮಾತಕತೆ ನಡೆಸಿದ್ದರು. ಇದಾದ ಬಳಿಕ ಮಹಾರಾಷ್ಟ್ರ ಸರ್ಕಾರದ ವೈದ್ಯರು ಮತ್ತು ದಾದಿಯರು ನೆರವು ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್-19 ನೋಡಲ್ ಅಧಿಕಾರಿಯಾಗಿರುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ನಿರ್ದೇಶಕ ಡಾ.ಟಿ.ಪಿ.ಲಹಾನೆ ಶೈಲಾಜಾ ಟೀಚರ್ ಗೆ ಪತ್ರ ಬರೆದು ನೆರವು ಕೇಳಿದ್ದಾರೆ. ಪತ್ರ ಬರೆದ ಡಾ.ಟಿ.ಪಿ.ಲಹಾನೆ, ಮುಂದಿನ ದಿನಗಳಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಹಾಗಾಗಿ ಕೋವಿಡ್ ವಿರುದ್ಧ ಹೋರಾಡಲು 50 ತಜ್ಞ ವೈದ್ಯರು ಮತ್ತು ದಾದಿಯರನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಕೇರಳದಿಂದ ಬರುವ ವೈದಕೀಯ ಸಿಬ್ಬಂದಿಗೆ ವಿಶೇಷ ಸೌಲಭ್ಯ
ಕೊರೊನಾ ವಿರುದ್ದ ನಡೆದಿರುವ ಹೋರಾಟಕ್ಕೆ ಭಾಗಿಯಾಗಲು ಕೇರಳದಿಂದ ಬಂದ ವೈದ್ಯರು, ದಾದಿಯರಿಗೆ ವಿಶೇಷ ಸೌಲಭ್ಯ ಮತ್ತು ಸಂಬಳ ನೀಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಒಂದು ತಿಂಗಳಿಗೆ ಎಂಡಿ ಮಾಡಿದ ವೈದ್ಯಕೀಯ ತಜ್ಞರಿಗೆ 2 ಲಕ್ಷ, ಎಂಬಿಬಿಎಸ್ ಮಾಡಿದ ವೈದ್ಯರಿಗೆ 80000, ತರಬೇತಿ ಪಡೆದ ಶುಶ್ರೂಷಕ ಸಿಬ್ಬಂದಿಗೆ ತಿಂಗಳಿಗೆ 30000 ಸಂಬಳ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ. ಸಂಬಳದ ಜೊತೆಗೆ ವೈದ್ಯಕೀಯ ಸಿಬ್ಬಂದಿಗೆ ಮಹಾರಾಷ್ಟ್ರ ಸರ್ಕಾರ ವಸತಿ, ಊಟ, ಅಗತ್ಯ ಔಷಧ. ವೈಯಕ್ತಿಕ ರಕ್ಷಣಾ ಕಿಟ್ಗಳನ್ನು ನೀಡುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.








