ಮುಂಬೈ, ಜೂನ್ 9: ಕೊರೋನಾ ಸೋಂಕಿಗೆ ಮಹಾರಾಷ್ಟ್ರ ತಲ್ಲಣಗೊಂಡಿದ್ದು, ಕೊರೊನಾ ನಿಯಂತ್ರಣ ಅಸಾಧ್ಯ ಎನ್ನುವ ಪರಿಸ್ಥಿತಿಗೆ ಮುಟ್ಟಿದೆ. ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹಳಷ್ಟು ವೇಗವಾಗಿ ಏರಿಕೆಯಾಗುತ್ತಿದ್ದು, ಇದೀಗ ಮಹಾರಾಷ್ಟ ಕೊರೊನಾ ಸೋಂಕಿನ ಕೇಂದ್ರ ಚೀನಾವನ್ನು ಹಿಂದಿಕ್ಕಿದೆ.
ಮಹಾರಾಷ್ಟ್ರದಲ್ಲಿ ಸೋಮವಾರ 2,553 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 88,528ಕ್ಕೆ ಏರಿದೆ.
ಇದು ಇಲ್ಲಿಯವರೆಗೆ ಚೀನಾದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಗಳಿಗಿಂತ ಹೆಚ್ಚಿದೆ. ಚೀನಾದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 83,040.

ಮಹಾರಾಷ್ಟ್ರದಲ್ಲಿ 3,000ಕ್ಕಿಂತಲೂ ಹೆಚ್ಚಿನ ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ರಾಷ್ಟದ ವಾಣಿಜ್ಯ ನಗರ ಮುಂಬೈ ನಗರವೊಂದರಿಂದಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದೆ. ಮುಂಬೈ ನಲ್ಲಿ ಇಲ್ಲಿಯವರೆಗೆ 50,085 ಪ್ರಕರಣಗಳು ಪತ್ತೆಯಾಗಿದೆ, 1702 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು ಭಾರತದಲ್ಲಿ ದಾಖಲಾಗುತ್ತಿರುವ ಪ್ರತಿ ಮೂರು ಕೊರೊನಾ ಪ್ರಕರಣದಲ್ಲಿ ಒಬ್ಬರು ಮಹಾರಾಷ್ಟ್ರದವರಾಗಿರುತ್ತಾರೆ. ಮಹಾರಾಷ್ಟ್ರದಲ್ಲಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.








