ಸಾಕು ಧೋನಿಯ ಜಪ… ಬೇಕಾಗಿದ್ದಾರೆ ಸಿಎಸ್ ಕೆಗೆ ಹೊಸ ಆಟಗಾರರು.. ಹುಡುಕಿಕೊಡಿ ಪ್ಲೀಸ್…!
ಮಹೇಂದ್ರ ಸಿಂಗ್ ಧೋನಿ.. ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿಯಾಗಿದೆ. ಇದೀಗ ಐಪಿಎಲ್ ಗೂ ಗುಡ್ ಬೈ ಹೇಳ್ತಾರಾ ?
ಈ ಪ್ರಶ್ನೆ ಸಹಜವಾಗಿ ಧೋನಿ ಅಭಿಮಾನಿಗಳಲ್ಲಿ ಮೂಡುತ್ತಿದೆ.
ಹಾಗೇ ನೋಡಿದ್ರೆ ಧೋನಿಯ ವಯಸ್ಸು ಕೂಡ 39 ಆಗಿದೆ. ಹಾಗಂತ ಅವರ ಫಿಟ್ ನೆಸ್ ನೋಡಿದ್ರೆ ಅನ್ನಿಸುವುದಿಲ್ಲ.
ಅದೇ ರೀತಿ ಕೀಪಿಂಗ್ ವಿಚಾರದಲ್ಲೂ ಧೋನಿಗೆ ವಯಸ್ಸು ಆಗಿದೆ ಎಂಬುದೇ ಭಾಸವಾಗುತ್ತಿಲ್ಲ.
ಅನುಭವ ಮತ್ತು ಕೌಶಲ್ಯ ಹಾಗೂ ಫಿಟ್ ನೆಸ್ ಅನ್ನು ನೋಡಿದ್ರೆ ಧೋನಿ ಇನ್ನೂ ಕನಿಷ್ಠವಾದ್ರೂ ಎರಡು ವರ್ಷ ಆಡುವಂತಹ ಸಾಮಥ್ರ್ಯವನ್ನು ಹೊಂದಿದ್ದಾರೆ.
ಆದ್ರೆ ಬ್ಯಾಟಿಂಗ್ ಫಾರ್ಮ್ ಅನ್ನು ನೋಡಿದ್ರೆ ಧೋನಿ ಲಯ ಕಳೆದುಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಅದಕ್ಕೂ ಒಂದು ಕಾರಣವಿದೆ.
2019ರ ವಿಶ್ವಕಪ್ ನಂತರ ಧೋನಿ ಕ್ರಿಕೆಟ್ ಆಡಿಲ್ಲ. ಅಂತಾರಾಷ್ಟ್ರೀಯ ಮತ್ತು ದೇಸಿ ಟೂರ್ನಿಗಳಿಂದ ದೂರವೇ ಉಳಿದಿದ್ದರು.
ಕಳೆದ ಮಾರ್ಚ್ ನಲ್ಲಿ ಐಪಿಎಲ್ ಗಾಗಿ ಅಭ್ಯಾಸದಲ್ಲಿ ನಿರತರಾಗಿದ್ರೂ ಕೋವಿಡ್-19 ಅಡ್ಡಿಯನ್ನುಂಟು ಮಾಡಿತ್ತು.
ಹೀಗಾಗಿ ಧೋನಿಗೆ ಅಭ್ಯಾಸದ ಕೊರತೆ ಕಾಡುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಅದೇನೇ ಇರಲಿ, ಧೋನಿ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸರಿಯಾದ ರೀತಿಯಲ್ಲಿ ಮುನ್ನೆಡಸಿಲ್ಲ ಎಂಬ ಆರೋಪವೂ ಅವರ ಮೇಲಿದೆ.
ಅದಕ್ಕೆ ಕಾರಣಗಳು ಹಲವು ಇರಬಹುದು. ತಂಡದೊಳಗಿನ ಬಿಕ್ಕಟ್ಟು, ಆಟಗಾರರ ವೈಫಲ್ಯ, ಸ್ವತಃ ಧೋನಿ ಬ್ಯಾಟಿಂಗ್ ನಲ್ಲಿ ವಿಫಲವಾಗಿರುವುದು,
ಗೆಲುವಿನ ತಂತ್ರಗಾರಿಕೆಯಲ್ಲಿ ವಿಫಲವಾಗಿರುವುದು, ಹಿರಿಯ ಆಟಗಾರರ ಮೇಲೆ ಹೆಚ್ಚು ಅವಲಂಬನೆ ಮಾಡಿಕೊಂಡಿರುವುದು, ಕಿರಿಯ ಆಟಗಾರರನ್ನು ಕಡೆಗಣಿಸಿರುವುದು..
ಹೀಗೆ ಸೋತಾಗ ಅನೇಕ ಕಾರಣಗಳು ಸಿಗುತ್ತವೆ.
ಆದ್ರೆ ಧೋನಿ ಯುವ ಆಟಗಾರರ ಮೇಲೆ ಬೊಟ್ಟು ಮಾಡಿ ತೋರಿಸುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಮೂಡುತ್ತಿದೆ.
ಹಾಗೇ ನೋಡಿದ್ರೆ ಈ ಬಾರಿಯ ಐಪಿಎಲ್ ಅಂತಲ್ಲ..
ಹಿಂದಿನ ಐಪಿಎಲ್ ಟೂರ್ನಿಯನ್ನು ನೋಡಿದಾಗಲೂ ಸಿಎಸ್ ಕೆ ತಂಡ ಯಾವತ್ತೂ ಯುವ ಆಟಗಾರರಿಗೆ ಹೆಚ್ಚು ಅವಕಾಶವನ್ನು ನೀಡಿಲ್ಲ.
ಒಂದು ವೇಳೆ ಅವಕಾಶ ನೀಡಿದ್ರೂ ಗಮನ ಸೆಳೆದಿರುವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.
ಅಷ್ಟೇ ಅಲ್ಲ, ಸಿಎಸ್ ಕೆ ತಂಡ ಪರ್ಯಾಯ ಆಟಗಾರರ ಕೊರತೆಯನ್ನು ಕಾಡುತ್ತಿದೆ.
ಧೋನಿಯ ನಂತರ ಯಾರು ತಂಡವನ್ನು ಮುನ್ನಡೆಸಬೇಕು ಅನ್ನೋ ಪ್ರಶ್ನೆಗೂ ಸಿಎಸ್ ಕೆ ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಉತ್ತರವಿಲ್ಲ.
ಬದಲಾಗಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.
ಮೂರು ಬಾರಿ ಚಾಂಪಿಯನ್, ಐದು ಬಾರಿ ರನ್ನರ್ ಅಪ್ ಆಗಿರುವ ಸಿಎಸ್ಕೆ ತಂಡಕ್ಕೆ ಧೋನಿ ಕೊಡುಗೆ ಅಪಾರ. ಅದನ್ನು ಯಾರು ಕೂಡ ಪ್ರಶ್ನೆ ಮಾಡುವಂಗಿಲ್ಲ.
ಧೋನಿ ನಾಯಕತ್ವದಲ್ಲಿ 100ಕ್ಕೂ ಅಧಿಕ ಪಂದ್ಯಗಳನ್ನು ಗೆದ್ದ ದಾಖಲೆ ಇದೆ. ಅತ್ಯಧಿಕ ಟೂರ್ನಿಗಳಲ್ಲಿ ಆಡಿರುವ ಗೌರವವೂ ಇದೆ.
ಕೀಪಿಂಗ್ ನಲ್ಲಿ 150ಕ್ಕೂ ಹೆಚ್ಚು ಕ್ಯಾಚ್, ಗರಿಷ್ಠ ಸಿಕ್ಸರ್, ಮ್ಯಾಚ್ ಫಿನಿಷರ್, 4000ಕ್ಕೂ ಅಧಿಕ ರನ್ ಹೀಗೆ ಧೋನಿ ಹೆಸರಿನ ಮುಂದೆ ಹಲವು ಸಾಧನೆಗಳು ಅಂಟಿಕೊಂಡಿವೆ.
ಆದ್ರೆ ಅದು ಈಗ ಲೆಕ್ಕಕ್ಕೆ ಬರುವುದಿಲ್ಲ. ಈ ಬಾರಿಯ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಾಠ ಕಲಿಸಿದೆ.
ತನ್ನದೇ ಆಪ್ತ ಬಳಗದವರನ್ನು ಕಟ್ಟಿಕೊಂಡ್ರೆ ಏನು ಆಗುತ್ತದೆ ಎಂಬುದಕ್ಕೆ ಸಿಎಸ್ಕೆ ತಂಡ ಉತ್ತಮ ನಿದರ್ಶನ.
ಒಟ್ಟಿನಲ್ಲಿ ಧೋನಿ ನಾಯಕನಾಗಿ ಸೋಲು ಅನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಕಾರಣ ನೀಡುವುದರಲ್ಲಿ ಅರ್ಥವಿಲ್ಲ. ಯಾಕಂದ್ರೆ ಸಿಎಸ್ಕೆ ತಂಡ ಅಂದ್ರೆ ಅದು ಧೋನಿಯ ತಂಡ.
ಅಲ್ಲಿ ತಂಡದ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯ ಧೋನಿಯ ಮೇಲಿದೆ.
ಹೀಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಹಳೆಯ ಹುಲಿಗಳನ್ನು ಆಯ್ಕೆ ಮಾಡಿಕೊಂಡು ಈಗ ಯುವ ಕ್ರಿಕೆಟಿಗರು ಸರಿಯಾಗಿ ಆಡಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ.
ಅಷ್ಟಕ್ಕೂ ಸಿಎಸ್ ಕೆ ತಂಡ ಎಷ್ಟು ಯುವ ಆಟಗಾರರಿಗೆ ಅವಕಾಶ ನೀಡಿದೆ ?
ದೇಸಿ ಟೂರ್ನಿ ಅಥವಾ 19 ವಯೋಮಿತಿ ವಿಶ್ವಕಪ್ ನಲ್ಲಿ ಆಡಿರುವಂತಹ ಎಷ್ಟು ಮಂದಿ ಯುವ ಪ್ರತಿಭೆಗಳು ಇದ್ದಾರೆ.
ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ ಕೊಟ್ಟಿದೆ ? ಹೀಗೆ ಹಲವು ಪ್ರಶ್ನೆಗಳಿಗೆ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತರ ನೀಡಬೇಕಿದೆ.
ಏನೇ ಆಗ್ಲಿ, ಧೋನಿಯ ಯುಗ ಮುಗಿಯುತ್ತಾ ಬಂದಿದೆ. ಎಲ್ಲದಕ್ಕೂ ಒಂದು ಅಂತ್ಯ ಇರುತ್ತೆ. ಆ ಸಮಯ ಬರುತ್ತಿದೆ.
ಇದನ್ನು ಧೋನಿ ಅರಿತುಕೊಳ್ಳಬೇಕು. ಇದು ಧೋನಿ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಬಹುದು.
ಹಾಗಂತ ಪ್ರತಿ ಬಾರಿಯೂ ಒಬ್ಬನೇ ಆಟಗಾರನ ಜಪ ಮಾಡೋದು ಸರಿಯಲ್ಲ.
ಹಳೆ ಬೇರು ಹೊಸ ಚಿಗುರು ಅನ್ನೋ ಹಾಗೇ ಹೊಸ ಆಟಗಾರರಿಗೆ ಚೆನ್ನೈ ಸೂಪರ್ ಕಿಂಗ್ಸ್ ಅವಕಾಶ ನೀಡುವ ಸಮಯ ಈಗ ಬಂದಿದೆ.








