ಶಾಸಕರ ಮನೆಯಲ್ಲಿ ಮನೆಯ ಕೆಲಸದಾಕೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಸಮಾಜವಾದಿ ಪಕ್ಷದ ಶಾಸಕರೊಬ್ಬರ ಮನೆಯಲ್ಲಿಯೇ ಕೆಲಸದಾಕೆ ಶವವಾಗಿ ಪತ್ತೆಯಾಗಿದ್ದು, ಈ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ. 17 ವರ್ಷದ ಬಾಲಕಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಶಾಸಕ ಜಾಹಿದ್ ಬೇಗ್ ಅವರ ಮನೆಯ ಟೆರೇಸ್ ನಲ್ಲಿ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಕೆಲಸದ ಬಾಲಕಿ ಪತ್ತೆಯಾಗಿದ್ದಾರೆ. ಘಟನೆಯನ್ನು ದೃಢಪಡಿಸಿದ ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ಮೀನಾಕ್ಷಿ ಕಾತ್ಯಾಯನ್ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಂಡ ಮತ್ತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ಊಟ ಮುಗಿಸಿ ಮಲಗಿದ್ದಳು ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದು, ಇವರು ಕಳೆದ ಆರು ವರ್ಷಗಳಿಂದ ಶಾಸಕರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.








