SSLC ವಿದ್ಯಾರ್ಥಿಗಳಿಗೆ ಮಹತ್ವದ ಬದಲಾವಣೆ ಘೋಷಣೆಯಾಗಿದ್ದು, ಇನ್ನು ಮುಂದೆ ತೃತೀಯ ಭಾಷೆಗೆ ಅಂಕ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
2026ರಿಂದ ನಡೆಯುವ SSLC ಪರೀಕ್ಷೆಯಿಂದಲೇ ಈ ಹೊಸ ನಿಯಮ ಅನ್ವಯವಾಗಲಿದೆ. ಇದುವರೆಗೆ ವಿದ್ಯಾರ್ಥಿಗಳು ಒಟ್ಟು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರೆ, ಮುಂದುವರೆಯುವ ಪದ್ಧತಿಯಲ್ಲಿ ಪರೀಕ್ಷೆ 625 ಅಂಕಗಳಿಗೇ ನಡೆಯುತ್ತದೆ. ಆದರೆ ಅಂಕಪಟ್ಟಿಯಲ್ಲಿ ತೃತೀಯ ಭಾಷೆಯ 100 ಅಂಕಗಳನ್ನು ಒಳಪಡಿಸಲಾಗುವುದಿಲ್ಲ.
ಅದರ ಪರಿಣಾಮವಾಗಿ, ವಿದ್ಯಾರ್ಥಿಗಳ ಅಂತಿಮ ಫಲಿತಾಂಶವು ಕೇವಲ 525 ಅಂಕಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಬದಲಾಗಿ, ತೃತೀಯ ಭಾಷಾ ವಿಷಯದಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ‘ಗ್ರೇಡ್’ ಮೂಲಕ ಅಳೆಯಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ.
ಈ ಬದಲಾವಣೆಯಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಈ ನಿರ್ಧಾರವು ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದ್ದು, ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನದಲ್ಲೂ ಹೊಸ ದಿಕ್ಕು ನೀಡಲಿದೆ.








