ಹೆಣ್ಮಕ್ಳೇ ಸ್ಟ್ರಾಂಗ್ ಗುರು : ಸ್ತ್ರಿ ಶಕ್ತಿಗೆ ಕೊರೊನಾ ಸಲಾಂ
ಸ್ತ್ರೀ ಶಕ್ತಿ ಸ್ವರೂಪಿ. ಹೆಣ್ಣು ಅಬಲೆ ಅಲ್ಲ, ಸಬಲೆ ಎಂದು ಹಿರಿಯರು ಸುಮ್ಮನೇ ಹೇಳಿಲ್ಲ. ಇತ್ತೀಚಿನ ಸಂಶೋಧನೆಯು ಈ ಮಾತನ್ನು ಗಟ್ಟಿಗೊಳಿಸುತ್ತಿವೆ. ಅನಾರೋಗ್ಯಕ್ಕೀಡದಾಗ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಕಾಣಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇತ್ತೀಚಿನ ಹೆಮ್ಮಾರಿ ಕೊರೊನಾ ಕೂಡ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ ಎಂದು ಯುಎಸ್ ನ ಯೇಲ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಕೊರೊನಾ ವೈರಸ್ ಸೋಂಕಿಗೆ ಒಳಗಾದಾಗ ದೇಹದ ರೋಗನಿರೋಧಕ ವ್ಯವಸ್ಥೆಯು ಪ್ರತಿಕ್ರಿಯಿಸುವ ವಿಧಾನವು ಹೆಣ್ಣು ಮತ್ತು ಗಂಡಿನಲ್ಲಿ ವಿಭಿನ್ನವಾಗಿರುತ್ತದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಹಾಗೆ ಕೊರೊನಾ ಸೋಂಕಿತ ಮಹಿಳೆಯರಿಗಿಂತ ಪುರುಷರಲ್ಲಿ ರೋಗಲಕ್ಷಣಗಳು ಹೆಚ್ಚಿರುತ್ತವೆ. ಅಲ್ಲದೆ ಸಾವಿನ ಪ್ರಮಾಣವೂ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.
ಕೋವಿಡ್ ರೋಗಿಗಳಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಕೈನುರೊನಿಕ್ ಆಸಿಡ್ ಪ್ರಮಾಣ ಹೆಚ್ಚಿರುವುದಾಗಿ ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ಆಸಿಡ್ ಎಲ್-ಟ್ರಿಪ್ಟೋಪಾನ್ ಎಂಬ ಅಮೈನೋ ಆಮ್ಲ ಎಂಬ ಜೀವಕ್ರಿಯೆಯಲ್ಲಿ ಉತ್ಪತ್ತಿಯಾಗುವ ಮೆಟಾಬೊಲೈಟ್ ಆಗಿದೆ. ಈ ಆಮ್ಲವು ನಿಯಾಸಿನ್ ಎಂಬ ಪೋಷಕಾಂಶದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಆಸಿಡ್ ನ ಮಟ್ಟವು ಹೆಚ್ಚಾಗಿದ್ದರೆ, ರೋಗದ ತೀವ್ರತೆಯು ಹೆಚ್ಚು ಎಂದು ಪರಿಗಣಿಸಲಾಗುತ್ತದೆ.
ಇನ್ನು ಈ ಅಧ್ಯಯನಕ್ಕಾಗಿ 22 ಮಹಿಳೆಯರು ಮತ್ತು 17 ಪುರುಷ ಕೋವಿಡ್ ಪೀಡಿತರಿಂದ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ತರುವಾಯ, 20 ಮಂದಿ ಸೋಂಕು ರಹಿತರ ಮಾದರಿಗಳಿಗೆ ಹೋಲಿಸಿ ಅಧ್ಯಯನ ಮಾಡಲಾಗಿದೆ. ಈ ಸಂಶೋಧನೆಯಲ್ಲಿ ಸುಮಾರು 75 ಚಯಾಪಚಯ ಗಳನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇವುಗಳಲ್ಲಿ, 17 ಚಯಾಪಚಯ ಗಳು ಕೊರೊನಾ ಕಾಯಿಲೆಗೆ ಸಂಬಂಧಿಸಿವೆ, ಇದರಲ್ಲಿ ಕೈನುರೆನಿಕ್ ಆಸಿಡ್ ಪುರುಷ ರೋಗಿಗಳಲ್ಲಿ ಹೆಚ್ಚಿನಮಟ್ಟದಲ್ಲಿರುವುದು ಕಂಡುಬಂದಿದೆ.
ಮಹಿಳೆಯರಲ್ಲಿ ಟಿ ಸೆಲ್ಸ್ ಹೆಚ್ಚು..
ಕೋವಿಡ್ ಸೋಂಕಿಗೆ ಒಳಗಾದ ಪುರುಷ ರೋಗಿಗಳಿಗೆ ಹೋಲಿಸಿದರೆ ಮಹಿಳಾ ರೋಗಿಗಳಲ್ಲಿ ಟಿ ಸೆಲ್ಸ್ ಕ್ರಿಯಾತ್ಮಕತೆ ಹೆಚ್ಚಾಗಿದೆ ಎಂದು ಯೇಲ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಈ ಟಿ ಸೆಲ್ಸ್ ಮಾನವ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಬಿ ಸೆಲ್ಸ್ ನಂತೆ ಪ್ರತಿಕಾಯಗಳನ್ನು ಉತ್ಪಾದಿಸುವುದಿಲ್ಲ, ಆದರೆ ನೇರವಾಗಿ ಹೊಸ್ಟ್ ಕಣಗಳನ್ನು ನಾಶ ಮಾಡುತ್ತವೆ. ಇದೇ ಸಮಯದಲ್ಲಿ, ಇತರ ರೋಗನಿರೋಧಕ ಕೋಶಗಳು ಸಕ್ರಿಯಗೊಳಿಸುತ್ತವೆ. ವಯಸ್ಸಾದಂತೆ ಪುರುಷ ಕೋವಿಡ್ ರೋಗಿಗಳಲ್ಲಿ ಈ ಟಿ ಸೆಲ್ ಪ್ರತಿಕ್ರಿಯೆ ಕಡಿಮೆಯಾಗುತ್ತಿದೆ, ಆದರೆ ಮಹಿಳಾ ರೋಗಿಗಳಲ್ಲಿ ವಯಸ್ಸಿನ ಸಂಬಂಧವಿಲ್ಲದೇ ಟಿ ಸೆಲ್ ಕ್ರಿಯಾತ್ಮಕವಾಗುತ್ತದೆ ಎಂದು ಅಧ್ಯಯನವು ಹೇಳಿದೆ. ಇನ್ನು ಸಂಶೋಧನೆಗಾಗಿ 98 ಪುರುಷ, ಮಹಿಳಾ ರೋಗಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಇಮ್ಯೂನಿಟಿ ರೆಸ್ಪಾನ್ಸ್ ಹೆಚ್ಚು
ವೈರಸ್, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳನ್ನು ಎದುರಿಸುವ ರೋಗನಿರೋಧಕ ಪ್ರತಿಕ್ರಿಯೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದಕ್ಕೆ ಕಾರಣ ಎಕ್ಸ್ ಕ್ರೋಮೋಸೋಮ್ ಗಳು. ಮಹಿಳೆಯರಲ್ಲಿ ಎಕ್ಸ್ ಎಕ್ಸ್ ಅನ್ನೋ ಎರಡು ಕ್ರೋಮೋಸೋಮ್ ಗಳು ಇರುತ್ತವೆ.
ಪುರುಷರಲ್ಲಿ ಒಂದು ಎಕ್ಸ್, ಒಂದು ವೈ ಕ್ರೋಮೋಸೋಮ್ ಎಂಬ ಎರಡು ಕ್ರೋಮೋಸೋಮ್ ಇರುವುದು ಗೊತ್ತಿರುವ ವಿಚಾರವೇ..! ಆದ್ರೆ ಮಹಿಳೆಯಲ್ಲಿರುವ ಡಬಲ್ ಎಕ್ಸ್ ಕ್ರೋಮೋಸೋಮ್ ಅವರಲ್ಲಿ ಬಲವಾದ ರೋಗನಿರೋಧಕ ಪ್ರತಿಕ್ರಿಯೆಗೆ ಕಾರಣವಾಗಿದೆ ಎಂದು ಸೈಂಟಿಸ್ಟ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಮಹಿಳೆಯರಲ್ಲಿ ಬಿಡುಗಡೆಯಾಗುವ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳು ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತವೆ.. ಫ್ಲೂ ಲಸಿಕೆಗಳನ್ನು ತೆಗೆದುಕೊಂಡ ನಂತರ ಫ್ಲೂ ವೈರಸ್ ಗೆ ಒಳಗಾಗಿದ್ದ ಮಹಿಳೆಯರಲ್ಲಿ ಪುರುಷರಿಗಿಂತ ಎರಡು ಪಟ್ಟು ಪ್ರತಿಕಾಯಗಳು ರಿಲೀಸ್ ಆಗಿವೆ.