ನವದೆಹಲಿ: ಎರಡು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ನಿಶ್ಕ್ರಿಯಗೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ರಾಹುಲ್ ಗಾಂಧಿ ಆಪ್ತರಿಗೆ ಮಣೆ ಹಾಕಲಾಗಿದೆ.
ಹಲವು ವರ್ಷಗಳಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆಪ್ತರಾಗಿದ್ದ ಹಲವು ಹಿರಿಯರಿಗೆ ಕೊಕ್ ನೀಡಿದ್ದರೆ, ಹೊಸಬರಿಗೆ ಸ್ಥಾನ ಕಲ್ಪಿಸಲಾಗಿದೆ. ಕೆಲ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳನ್ನೂ ಬದಲಾವಣೆ ಮಾಡಲಾಗಿದೆ.

ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದ ಪತ್ರ ಬರೆದಿದ್ದ ಬಹುತೇಕರನ್ನು ಪದಾಧಿಕಾರಿಗಳ ಪಟ್ಟಿಯಿಂದಲೇ ಕಿಕ್‍ಔಟ್ ಮಾಡಲಾಗಿದೆ. ಮಲ್ಲಿಕಾರ್ಜುನ್ ಖರ್ಗೆ, ಗುಲಾಮ್ ನಬಿ ಆಜಾದ್, ಅಂಬಿಕಾ ಸೋನಿ, ಕಪಿಲ್ ಸಿಬಲ್ ಸೇರಿದಂತೆ ಹಿರಿಯ ನಾಯಕರನ್ನು ಸಂಘಟನಾ ಜವಾಬ್ದಾರಿಗಳಿಂದ ತೆಗೆದು ಹಾಕಲಾಗಿದೆ.
ಸೋನಿಯಾಗಾಂಧಿ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ಉಸ್ತುವಾರಿಯಿಂದ ತೆಗೆದು ಹಾಕಲಾಗಿದೆ.
ಪಕ್ಷದ ಸಂಘಟನೆಯಲ್ಲಿ ಬದಲಾವಣೆ ತರುವಂತೆ ಪತ್ರ ಬರೆದಿದ್ದ ಗುಲಾಮ್ ನಬಿ ಆಜಾದ್‍ರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದು, ಆ ಸ್ಥಾನಕ್ಕೆ ಮಾಜಿ ಸಚಿವ ತಾರೀಖ್ ಅನ್ವರ್‍ರನ್ನು ನೇಮಕ ಮಾಡಲಾಗಿದೆ. ಗುಲಾಂ ನಬಿ ಆಜಾದ್‍ಗೆ ನೀಡಿದ್ದ ಹರಿಯಾಣದ ಉಸ್ತುವಾರಿಯಿಂದ ಕಿತ್ತುಹಾಕಿ ವಿವೇಕ್ ಬನ್ಸಾಲ್‍ರನ್ನು ನೇಮಕ ಮಾಡಲಾಗಿದೆ.
ವಿಶೇಷ ಎಂದರೆ ರಾಹುಲ್‍ಗಾಂಧಿ ಪರಮಾಪ್ತರಾದ ರಂದೀಪ್ ಸುರ್ಜೆವಾಲಾ ಹಾಗೂ ಕೆ.ಸಿ ವೇಣುಗೋಪಾಲ್‍ಗೆ ಎಲ್ಲಾ ಕಮಿಟಿಗಳಲ್ಲೂ ಸ್ಥಾನ ನೀಡಲಾಗಿದೆ.
ಹಲವು ರಾಜ್ಯಗಳ ಉಸ್ತುವಾರಿಗಳ ಬದಲಾವಣೆ
ಎಐಸಿಸಿಗೆ ಮೇಜರ್ ಸರ್ಜರಿ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಮಾಡಲಾಗಿದೆ.
ಮಹಾರಾಷ್ಟ್ರ ಉಸ್ತುವಾರಿಯಿಂದ ಮಲ್ಲಿಕಾರ್ಜುನ ಖರ್ಗೆಗೆ ಗೇಟ್‍ಪಾಸ್ ನೀಡಿ ಕನ್ನಡಿಗರೇ ಆದ ಹೆಚ್.ಕೆ ಪಾಟೀಲ್‍ಗೆ ಬಡ್ತಿ ನೀಡಲಾಗಿದೆ.
ಎಐಸಿಸಿಯ ಪ್ರಮುಖ ಹುದ್ದೆಗಳನ್ನು ಕೆ.ಸಿ ವೇಣುಗೋಪಾಲ್ ಅವರಿಗೆ ನೀಡಿದ ಕಾರಣ ಅವರನ್ನು ಕರ್ನಾಟಕ ಉಸ್ತುವಾರಿಯಿಂದ ಬಿಡುಗಡೆ ಮಾಡಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ವಕ್ತಾರರಾಗಿದ್ದ ಸುರ್ಜೆವಾಲಾ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆ ಬಡ್ತಿ ನೀಡಿ ಕರ್ನಾಟಕದ ಸಂಘಟನೆಯ ಹೊಣೆ ನೀಡಲಾಗಿದೆ.
ಇದೇ ಮೊದಲ ಬಾರಿಗೆ ದಿನೇಶ್ ಗುಂಡೂರಾವ್‍ಗೆ ಮಹತ್ವದ ಹುದ್ದೆ ನೀಡಲಾಗಿದೆ. ತಮಿಳುನಾಡು, ಪಾಂಡಿಚೇರಿ ಹಾಗೂ ಗೋವಾ ಉಸ್ತುವಾರಿಯಾಗಿ ದಿನೇಶ್ ಗುಂಡುರಾವ್ ನೇಮಕ ಮಾಡಲಾಗಿದೆ.









