ವಿದುರಾಶ್ವತ್ಥವನ್ನು ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿಸಿ : ಡಾ.ಕೆ.ಸುಧಾಕರ್ ಮನವಿ
ಚಿಕ್ಕಬಳ್ಳಾಪುರ : ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ವಿದುರಾಶ್ವತ್ಥವನ್ನು ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ವಿದುರಾಶ್ವತ್ಥದಲ್ಲಿ 1938 ರಲ್ಲಿ ಧ್ವಜಾರೋಹಣ ನೆರವೇರಿಸುವ ವೇಳೆ ಬ್ರಿಟಿಷರು ಗುಂಡಿನ ದಾಳಿ ನಡೆಸಿ ಹೋರಾಟಗಾರರು ಹುತಾತ್ಮರಾದರು. ಈ ಸ್ಥಳಕ್ಕೆ ವಿದುರ ಬಂದು ಅಶ್ವತ್ಥಕಟ್ಟೆ ನಿರ್ಮಿಸಿದರು ಎಂಬ ಹಿನ್ನೆಲೆ ಇದೆ. ಇಲ್ಲಿ ನಾಗಪೂಜೆ ಕೂಡ ನಡೆಯುತ್ತಿದೆ. ಇದನ್ನು ಐತಿಹಾಸಿಕ, ಧಾರ್ಮಿಕ ತಾಣವಾಗಿ ಅಭಿವೃದ್ಧಿಪಡಿಸಿ, ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು. ಈಗಾಗಲೇ ಸಮಿತಿಯು ಡಿಪಿಆರ್ ಮಾಡಿಕೊಟ್ಟಿದ್ದು, ಇದಕ್ಕಾಗಿ 15-16 ಕೋಟಿ ರೂ. ಖರ್ಚಾಗುತ್ತದೆ. ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.
ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಚಿಂತನೆ ನಡೆಸಲು ಕಾರ್ಯಕ್ರಮ ನಡೆಸುವಂತೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕರು ಹುತಾತ್ಮರಾಗಿದ್ದು, ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತಿದೆ. ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾದ ವಿದುರಾಶ್ವತ್ಥದಲ್ಲಿ ಕೂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕೃಷ್ಣಾ ನದಿಯಿಂದ 5 ಟಿಎಂಸಿಯನ್ನು ಆಂಧ್ರಪ್ರದೇಶದಿಂದ ಸಹಕಾರದಿಂದ ಪಡೆದರೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಬಹುದು. ನಮ್ಮ ನದಿ ಮೂಲಗಳಿಂದ ಆ ರಾಜ್ಯದ ಜನರಿಗೆ ನೀರು ನೀಡಬಹುದು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದು, ಮುಂದಿನ ವರ್ಷದ ಜೂನ್ ಗೆ ಸಿದ್ಧವಾಗಲಿದೆ ಎಂದರು.
ಕೋವಿಡ್ ಆರ್ಥಿಕ ಸಂಕಷ್ಟವಿರುವುದರಿಂದ ಈ ಬಾರಿ ಹೆಚ್ಚಿನ ಗಾತ್ರದ ಬಜೆಟ್ ನೀಡುವುದಿಲ್ಲ ಎಂಬ ಅಪನಂಬಿಕೆ ಇತ್ತು. ಆದರೆ ಮುಖ್ಯಮಂತ್ರಿಗಳು ಹೆಚ್ಚು ಗಾತ್ರದ ಬಜೆಟ್ ಮಂಡಿಸಿ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಮಹಿಳಾ ಅಸಮಾನತೆ ದೂರವಾಗಿಸಲು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಂಡಿಸಿದ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತಮ ಕೊಡುಗೆ ನೀಡಲಾಗಿದೆ. ನಂದಿ ಬೆಟ್ಟ, ಎತ್ತಿನೆಹೊಳೆ ಯೋಜನೆ ಜಾರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದರು.