ಕೊಪ್ಪಳ: ಸಿಎಂ ಕಾನ್ವೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ (Janardhan Reddy) ಕಾರು ಸೇರಿದಂತೆ ಮೂರು ಕಾರುಗಳನ್ನು ಗಂಗಾವತಿ ಟ್ರಾಫಿಕ್ ಪೊಲೀಸರು ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕಾರನ್ನು ಸೀಜ್ ಮಾಡಿ, ಗಂಗಾವತಿಗೆ ಟ್ರಾಫಿಕ್ ಪೊಲೀಸರು ಕೊಂಡೊಯ್ದಿದ್ದಾರೆ. ಅಲ್ಲದೇ ಅವರ ಇಬ್ಬರು ಬೆಂಬಲಿಗರ ಕಾರನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಜನಾರ್ದನ ರೆಡ್ಡಿಯವರ ರೇಂಜ್ ರೋವರ್ ಸೇರಿ ಬೆಂಬಲಿಗರ ಸ್ಕಾರ್ಪಿಯೋ ಹಾಗೂ ಫಾರ್ಚೂನರ್ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಅ.5ರ ರಾತ್ರಿ ರಾಯಚೂರಿನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ತೆರಳುತ್ತಿದ್ದಾಗ ಡಿವೈಡರ್ ಮೇಲೆಯೇ ಕಾರು ಹತ್ತಿಸಿ ಸಿಎಂ ಬರುತ್ತಿದ್ದ ಮಾರ್ಗದಲ್ಲೇ ಕಾರು ಚಲಾಯಿಸಿಕೊಂಡು ತೆರಳಿದ್ದರು. ಸಿಎಂ ಕಾರು ಆಗಮಿಸುತ್ತಿದ್ದ ವೇಳೆ ಎದುರಿನಿಂದ ಮತ್ತೊಂದು ಕಾರು ಬರುವುದನ್ನು ಕಂಡ ಬೆಂಗಾವಲು ಪಡೆ ಕೊನೆಗೆ ತಮ್ಮ ಕಾರನ್ನೇ ನಿಲ್ಲಿಸಿ ಜನಾರ್ದನ ರೆಡ್ಡಿ ಕಾರು ತೆರಳಿದ ನಂತರ ಸಿಎಂ ಕಾರನ್ನು ಬಿಟ್ಟಿದ್ದರು.
ಹೀಗಾಗಿ ಕಾರು ಚಾಲಕ ಹುಸೇನ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು.