Mallikarjun Kharge 2ನೇ ಕನ್ನಡಿಗ.. 4ನೇ ದಕ್ಷಿಣ ಭಾರತದ ನಾಯಕ.. ಖರ್ಗೆಗೆ 6 ಸವಾಲು
ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ನೂತನ ಅಧ್ಯಕ್ಷರಾಗಿ ಚುನಾಯಿತಗೊಂಡಿದ್ದಾರೆ.
ಆ ಮೂಲಕ 24 ವರ್ಷದ ಬಳಿಕ ಗಾಂಧಿಯೇತರ ವ್ಯಕ್ತಿ ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಾರಥಿಯಾಗಿದ್ದಾರೆ. ಆ ಮೂಲಕ ಎಐಸಿಸಿ ಅಧ್ಯಕ್ಷರಾದ ಕರ್ನಾಟಕದ ಎರಡನೇ ದಕ್ಷಿಣ ಭಾರತದ ನಾಲ್ಕನೇ ರಾಜಕಾರಣಿಯಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಒಟ್ಟು 9385 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 415 ಮತಗಳನ್ನು ಅಮಾನ್ಯಗೊಳಿಸಲಾಗಿತ್ತು. ಈ ಪೈಕಿ ಮಲ್ಲಿಕಾರ್ಜುನ್ ಖರ್ಗೆ ಅವರು 7897 ಮತಗಳನ್ನು ಪಡೆದು ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ. ಖರ್ಗೆ ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್ 1072 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನ ಭೀಷ್ಮ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ.
ಅಂದಹಾಗೆ ಖರ್ಗೆ ಅವರ ಪೊಲಿಟಿಕಲ್ ಜರ್ನಿ ಶುರುವಾಗಿದ್ದು, ಕಾಲೇಜು ಯೂನಿಯನ್ ನಿಂದ. ಅವರು ಕಾಲೇಜು ಯೂನಿಯಲ್ ಎಲೆಕ್ಷನ್ ನಲ್ಲಿ ಜನರಲ್ ಸೆಕ್ರೆಟ್ರಿ ಯಾಗಿ ಆಯ್ಕೆಯಾಗಿದ್ದರು.
1969ರಲ್ಲಿ ಕಾಂಗ್ರೆಸ್ ಪಾಳಯ ಸೇರಿದ ಖರ್ಗೆ 1972ರಲ್ಲಿ ಗುರುಮಿಠಕಲ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಹಿಂದುರುಗಿ ನೋಡದ ಖರ್ಗೆ 2008ರ ವರೆಗೂ ಸತತ 9 ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದರ ನಡುವೆ 1990ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ. ಧರ್ಮಸಿಂಗ್ ಸಂಪುಟದಲ್ಲಿ ಸಾರಿಗೆ, ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿದ್ದಾರೆ. 2005ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರು. 2008ರಲ್ಲಿ ಎರಡನೇ ಬಾರಿಗೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರು.
ಇದಾದ ಬಳಿಕ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ ಖರ್ಗೆ 2009ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಕೇಂದ್ರ ಮಂತ್ರಿಯಾದರು. ನಂತರ 2014ರಲ್ಲಿ ಎರಡನೇ ಬಾರಿಗೆ ಲೋಕಸಭಾ ಕ್ಷೇತ್ರದಿಂದ ಜಯ ಸಾಧಿಸಿದ್ರು. ಅಲ್ಲದೇ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿಕಂಡ ಖರ್ಗೆ 2021ರಲ್ಲಿ ರಾಜ್ಯಸಭಾ ವಿಪಕ್ಷ ನಾಯಕರಾಗಿ ನೇಮಕಗೊಂಡರು.
ಸುಮಾರು 50 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿರುವ ಖರ್ಗೆ ಅವರು ಇದೀಗ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಚುನಾಯಿತಗೊಂಡಿದ್ದಾರೆ. ಆದ್ರೆ ಖರ್ಗೆ ಮುಂದಿನ ಹಾದಿ ಸುಗಮವಾಗಿಲ್ಲ.
ಯಾಕಂದರೆ ಸದ್ಯ ದೇಶದಲ್ಲಿ ಕಾಂಗ್ರೆಸ್ ಕೊನೆಯುಸಿರಿನಲ್ಲಿ ಇದೆ. ಮುಂದೆ ಸಾಲು ಸಾಲು ಚುನಾವಣೆಗಳಿವೆ. ಮುಂದಿನ ವರ್ಷ ಆರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಹೊಸ ಜೀವ ತುಂಬಬೇಕಿದೆ. ಮುಖ್ಯವಾಗಿ ಮುಂದಿನ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಇದು ಖರ್ಗೆಗೆ ಪ್ರತಿಷ್ಠೆಯ ಚುನಾವಣೆಯಾಗಿರುತ್ತದೆ.
ಇದಕ್ಕೂ ಮೊದಲು ಸದ್ಯ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಎದ್ದಿರುವ ಬಿರುಗಾಳಿಯನ್ನ ತಣ್ಣಗಾಣಿಸಬೇಕಾಗಿದೆ. ಜೊತಗೆ ಮುಂದಿನ ತಿಂಗಳು ಗುಜರಾತ್, ಹಿಮಾಚಲ್ ಪ್ರದೇಶದ ಚುನಾವಣೆಗಳು ಘೋಷಣೆಯಾಗಲಿವೆ. ಈ ಎರಡರಲ್ಲಿ ಒಂದು ರಾಜ್ಯದಲ್ಲಿದ್ರೂ ಖರ್ಗೆ ತಮ್ಮ ನಾಯಕತ್ವದ ತಾಕತ್ತನ್ನು ತೋರಿಸಬೇಕಿದೆ.
ಇನ್ನು 2024ರ ಲೋಕಸಭಾ ಚುನಾವಣೆ ಒಳಗೆ ದೇಶದಲ್ಲಿ ಆರು ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹೀಗಾಗಿ ಈ ಸಾಲು ಸಾಲು ಚುನಾವಣೆಗಳಲ್ಲಿ ಖರ್ಗೆ ಅವರು ಕಾಂಗ್ರೆಸ್ ಪಕ್ಷವನ್ನು ಹೇಗೆ ಮುನ್ನಡೆಸುತ್ತಾರೆ ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.