ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಆಂತರಿಕ ಬಿರುಗಾಳಿಯೊಂದು ಭುಗಿಲೆದ್ದಿದೆ. ಒಂದೆಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡುತ್ತಿರುವ ಸಂಗತಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪದಚ್ಯುತಿಗೆ ಒತ್ತಾಯ ಕೇಳಿಬಂದಿದೆ. ಮಲ್ಲಿಕಾರ್ಜುನ ಖರ್ಗೆ ಹಠಾವೋ, ಪ್ರಿಯಾಂಕಾ ಗಾಂಧಿ ಲಾವೋ ಎಂಬ ಘೋಷಣೆ ಇದೀಗ ಪಕ್ಷದ ಪಡಸಾಲೆಯಲ್ಲಿ ಪ್ರತಿಧ್ವನಿಸುತ್ತಿದ್ದು, ಕಾಂಗ್ರೆಸ್ ನಾಯಕತ್ವದ ಬದಲಾವಣೆಗೆ ಒತ್ತಾಯಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನೆಯಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಒಡಿಶಾದಿಂದ ಸಿಡಿದ ಅಸಮಾಧಾನದ ಬಾಂಬ್
ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಮತ್ತೆ ಗಾಂಧಿ ಕುಟುಂಬವೇ ಹಿಡಿಯಬೇಕು ಎಂಬ ಕೂಗು ಬಲವಾಗುತ್ತಿದೆ. ಒಡಿಶಾ ಕಾಂಗ್ರೆಸ್‌ನ ಪ್ರಬಲ ನಾಯಕ ಹಾಗೂ ಮಾಜಿ ಶಾಸಕ ಮೊಹಮ್ಮದ್ ಮೊಖಿಮ್ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಮತ್ತು ರಾಹುಲ್ ಗಾಂಧಿ ಅವರ ಉಸ್ತುವಾರಿಯಲ್ಲಿ ಒಡಿಶಾದಲ್ಲಿ ಕಾಂಗ್ರೆಸ್ ಪಕ್ಷ ಅಧಃಪತನದ ಹಾದಿ ಹಿಡಿದಿದೆ ಎಂದು ಮೊಖಿಮ್ ನೇರವಾಗಿ ಆರೋಪಿಸಿದ್ದಾರೆ. ಹೀಗಾಗಿ ಪಕ್ಷವನ್ನು ಉಳಿಸಬೇಕಾದರೆ ತಕ್ಷಣವೇ ಖರ್ಗೆ ಅವರನ್ನು ಕೆಳಗಿಳಿಸಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಬೇಕು ಎಂದು ಅವರು ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.
ಗಾಂಧಿ ಕುಟುಂಬವೇ ಬೇಕು ಎಂಬ ಹಠ
ಪಕ್ಷವು ಸತತ ಸೋಲುಗಳನ್ನು ಕಾಣುತ್ತಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಗಾಂಧಿ ಕುಟುಂಬದ ವರ್ಚಸ್ಸು ಅತ್ಯಗತ್ಯ ಎಂಬುದು ಅಸಮಾಧಾನಿತ ನಾಯಕರ ವಾದವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯವೈಖರಿ ಬಗ್ಗೆ ಅಪಸ್ವರ ಎತ್ತಿರುವ ಮೊಹಮ್ಮದ್ ಮೊಖಿಮ್, ಪಕ್ಷಕ್ಕೆ ಹೊಸ ಚೈತನ್ಯ ನೀಡಲು ಪ್ರಿಯಾಂಕಾ ಗಾಂಧಿ ಅವರೇ ಸೂಕ್ತ ನಾಯಕಿ ಎಂದು ಪ್ರತಿಪಾದಿಸಿದ್ದಾರೆ. ಈ ಪತ್ರವು ಕೇವಲ ಒಡಿಶಾಗೆ ಸೀಮಿತವಾಗದೆ, ರಾಷ್ಟ್ರಮಟ್ಟದಲ್ಲಿ ಖರ್ಗೆ ವಿರೋಧಿ ಬಣಕ್ಕೆ ಅಸ್ತ್ರವಾಗಿ ಪರಿಣಮಿಸಿದೆ.
ಪಕ್ಷದೊಳಗೆ ಇಬ್ಭಾಗ: ಖರ್ಗೆ ಪರ-ವಿರೋಧ ಬಣಗಳ ಕಾದಾಟ
ಮೊಹಮ್ಮದ್ ಮೊಖಿಮ್ ಬರೆದ ಪತ್ರ ಕಾಂಗ್ರೆಸ್ ಪಾಳೆಯವನ್ನು ಎರಡು ಬಣಗಳಾಗಿ ಒಡೆದಿದೆ.
ಬದಲಾವಣೆಗೆ ಬೆಂಬಲ: ಒಡಿಶಾ ಕಾಂಗ್ರೆಸ್‌ನ ಹಿರಿಯ ನಾಯಕ ನರಸಿಂಗ ಮಿಶ್ರಾ ಅವರು ಅಧ್ಯಕ್ಷರ ಬದಲಾವಣೆಯ ಪ್ರಸ್ತಾಪಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಪಕ್ಷವು ಹಲವು ರಾಜ್ಯಗಳಲ್ಲಿ ಹೀನಾಯ ಸೋಲು ಕಂಡಿದೆ ಮತ್ತು ಪಕ್ಷದ ಅಸ್ತಿತ್ವವೇ ಕ್ಷೀಣಿಸುತ್ತಿದೆ. ಸೋಲಿನ ನೈತಿಕ ಹೊಣೆಯನ್ನು ಅಧ್ಯಕ್ಷರೇ ಹೊರಬೇಕಾಗುತ್ತದೆ. ಆದರೆ ಅದು ಆಗುತ್ತಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಕಾಲದ ಅನಿವಾರ್ಯತೆ ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ರಾಹುಲ್ ಗಾಂಧಿ ಮತ್ತು ಖರ್ಗೆ ವಿರುದ್ಧದ ಆರೋಪಕ್ಕೆ ಪಕ್ಷದ ಮತ್ತೊಂದು ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಜಯದೇವ್ ಜೆನಾ ಮತ್ತು ಮಾಜಿ ಸಂಸದ ಅನಂತ ಪ್ರಸಾದ್ ಅವರು ಮೊಖಿಮ್ ಪತ್ರವನ್ನು ಕಟುವಾಗಿ ಟೀಕಿಸಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಸಂಬದ್ಧ ಪತ್ರ ಬರೆದು ಗೊಂದಲ ಸೃಷ್ಟಿಸುವುದು ಸರಿಯಲ್ಲ. ರಾಹುಲ್ ಗಾಂಧಿ ವಿರುದ್ಧ ಮಾತನಾಡಿರುವುದಕ್ಕೆ ಮೊಖಿಮ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ರಾಷ್ಟ್ರಮಟ್ಟದಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕುರ್ಚಿಗೂ ಕುತ್ತು ಬಂದಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಆಂತರಿಕ ಕಲಹವನ್ನು ಸೋನಿಯಾ ಗಾಂಧಿ ಹೇಗೆ ಶಮನ ಮಾಡಲಿದ್ದಾರೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ.








