ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ ಸ್ವೀಕಾರ….
ನೂತನವಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಖರ್ಗೆ ಅವರೊಂದಿಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಉಪಸ್ಥಿತರಿದ್ದಾರೆ. ವೇದಿಕೆಯಲ್ಲಿ ಖರ್ಗೆ ಅವರನ್ನು ಸೋನಿಯಾ ಮತ್ತು ರಾಹುಲ್ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಇದಾದ ಬಳಿಕ ಚುನಾವಣಾಧಿಕಾರಿ ಮಧುಸೂದನ್ ಮಿಸ್ತ್ರಿ ಅವರು ಖರ್ಗೆ ಅವರಿಗೆ ಗೆಲುವಿನ ಪ್ರಮಾಣ ಪತ್ರ ಹಸ್ತಾಂತರಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮಾಣ ವಚನಕ್ಕೆ ಆಗಮಿಸುವ ಮುನ್ನ ಎಐಸಿಸಿ ಕೇಂದ್ರ ಕಚೇರಿಗೆ ಆಗಮಿಸುವ ಮುನ್ನ ರಾಜ್ಘಾಟ್ನಲ್ಲಿ ಗಾಂಧೀಜಿ ಅವರಿಗೆ ನಮನ ಸಲ್ಲಿಸಿದರು. ಇದಾದ ನಂತರ ಅವರು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ದಲಿತ ನಾಯಕ ಬಾಬು ಜಗಜೀವನ್ ರಾಮ್ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಶಶಿ ತರೂರ್ ಅವರನ್ನು 6825 ಮತಗಳ ಅಂತರದಿಂದ ಸೋಲಿಸಿದ್ದಾರೆ. ಖರ್ಗೆ 7897 ಮತಗಳನ್ನು ಪಡೆದರೆ, ತರೂರ್ ಕೇವಲ 1072 ಮತಗಳನ್ನು ಗಳಿಸಿದರು. ಈ ಚುನಾವಣೆಯಲ್ಲಿ ಗೆಲುವಿನೊಂದಿಗೆ ಕಾಂಗ್ರೆಸ್ ಅಧ್ಯಕ್ಷರಾಗಿರುವ 65ನೇ ನಾಯಕ ಎಂಬ ಹೆಗ್ಗಳಿಕೆಗೆ ಖರ್ಗೆ ಪಾತ್ರರಾಗಿದ್ದಾರೆ. ಬಾಬು ಜಗಜೀವನ್ ರಾಮ್ ನಂತರ ಕಾಂಗ್ರೆಸ್ ಅಧ್ಯಕ್ಷರಾದ ಎರಡನೇ ದಲಿತ ನಾಯಕ. ಇದಲ್ಲದೇ ಕರ್ನಾಟಕದಿಂದ ಈ ಹುದ್ದೆ ಅಲಂಕರಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Mallikarjuna Kharge was sworn in as the new president of the Congress party.