ಹೈದರಾಬಾದ್ : ಲಾಕ್ ಡೌನ್ ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ ಮದ್ಯ ಸರಬರಾಜು ನಿರ್ಬಂಧಿಸಲಾಗಿದೆ. ಇದರಿಂದ ಮದ್ಯಪ್ರಿಯರು ಸಂಕಷ್ಟಕ್ಕೀಡಾಗಿದ್ದು, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸಿಎಂಗೆ ಟ್ವೀಟ್ ಮೂಲಕ ಸಲಹೆಯೊಂದನ್ನು ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮನೆ ಮನೆಗೆ ಮದ್ಯದ ಬಾಟಲ್ ವ್ಯವಸ್ಥೆ ಮಾಡುವುದಾಗಿ ಸೂಚಿಸಿದ್ದಾರೆ ಎಂಬ ಸುಳ್ಳುಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಲಿಕ್ಕರ್ ವ್ಯವಸ್ಥೆ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ‘ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಲ್ಲಿ ನನ್ನದೊಂದು ಮನವಿ. ತಲೆ ಕೆಡಿಸಿಕೊಳ್ಳುತ್ತಿರುವವರು, ಮಕ್ಕಳಂತೆ ಅಳುತ್ತಿರುವವರು, ಹುಚ್ಚಾಸ್ಪತ್ರೆ ಸೇರುತ್ತಿರುವವರು, ಹತಾಶೆಯಲ್ಲಿ ಬಳಲಿ ಪತ್ನಿಯರಿಗೆ ಹೊಡೆಯುತ್ತಿರುವವರ ಪರವಾಗಿ ನನ್ನದೊಂದು ಮನವಿಯಿದೆ. ಮಮತಾ ಬ್ಯಾನರ್ಜಿ ರೀತಿ ವಿಶಾಲ ಹೃದಯವಿರಲಿ’ ಎಂದು ಬರೆದುಕೊಂಡಿದ್ದಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೆಟಿಆರ್ ‘ರಾಮು ಅವರೇ ನೀವು ಕೂದಲು ಕಟ್ ಮಾಡುವ ಬಗ್ಗೆ ಮಾತನಾಡುತ್ತಿದ್ದೀರಾ? ಅಲ್ಲವೇ’ ಎಂದು ಟ್ವೀಟ್ ಮಾಡಿದ್ದಾರೆ.








