ಸುಭಾಷ್ ಚಂದ್ರ ಬೋಸ್ ಜನ್ಮದಿನ ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಿ – ಮಮತಾ ಬ್ಯಾನರ್ಜಿ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರವು ಬೋಸ್ ಅವರ ಜನ್ಮದಿನವನ್ನ ‘ಪರಾಕ್ರಮ್ ದಿವಸ್’ (ಶೌರ್ಯದ ದಿನ) ಎಂದು ಆಚರಿಸುತ್ತಿದೆ.
“ನೇತಾಜಿಯವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ನಾವು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ, ಇಡೀ ರಾಷ್ಟ್ರವು ರಾಷ್ಟ್ರೀಯ ನಾಯಕನಿಗೆ ಗೌರವ ಸಲ್ಲಿಸಲು ಮತ್ತು ದೇಶ್ ನಾಯಕ್ ದಿವಸ್ ಅನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಆಚರಿಸಲು ಅನುವು ಮಾಡಿಕೊಡುತ್ತದೆ” ಎಂದು ಮಮತಾ ಬ್ಯಾನರ್ಜಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅಪ್ರತಿಮ ನಾಯಕನಿಗೆ ಗೌರವ ಸಲ್ಲಿಸಿದ ಮಮತ, “ಅವರು ದೇಶಭಕ್ತಿ, ಧೈರ್ಯ, ನಾಯಕತ್ವ, ಏಕತೆ ಮತ್ತು ಸಹೋದರತ್ವದ ಪ್ರತಿರೂಪ. ನೇತಾಜಿ ತಲೆಮಾರುಗಳಿಂದಲೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಎಲ್ಲಾ ಕೋವಿಡ್ -19 ಪ್ರೋಟೋಕಾಲ್ಗಳನ್ನು ಅನುಸರಿಸಿ ರಾಜ್ಯದಾದ್ಯಂತ ಸೂಕ್ತವಾದ ರೀತಿಯಲ್ಲಿ ನೇತಾಜಿಯವರ 125 ನೇ ಜನ್ಮದಿನವನ್ನು ‘ದೇಶ ನಾಯಕ್ ದಿಬಾಸ್’ ಎಂದು ಆಚರಿಸಲು ಪಶ್ಚಿಮ ಬಂಗಾಳ ಸರ್ಕಾರವು ಸಿದ್ಧವಾಗಿದೆ ಎಂದು ಅವರು ಹೇಳಿದರು.