ಕೃಪೆ – ಹಿಂಡವಿ
ಮೋದಿಗಿರಿಗೆ ದೀದಿಗಿರಿ ಸವಾಲು:
ಶುರುವಾಗಿದೆ ಮುಂಬರುವ ಲೋಕಸಭಾ ಚುನಾವಣೆಗೆ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಮಮತಾ ದೀದಿ ಬ್ರಾಂಡಿಂಗ್:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸಿಎಂ ಪಟ್ಟ ಭದ್ರವಾಗಿದೆ. ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ವಿರುದ್ಧ 58 ಸಾವಿರ ಚಿಲ್ಲರೆ ಮತಗಳನ್ನು ಪಡೆದುಕೊಳ್ಳುವ ಮೂಲಕ ದೀದಿ ಕೇವಲ ಸಿಎಂ ಸ್ಥಾನ ಮಾತ್ರ ಪಕ್ಕಾ ಮಾಡಿಕೊಂಡಿಲ್ಲ, ಅವಳ ಈ ಗೆಲುವು ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಬದಲಾವಣೆಯ ಸೂಚನೆ ನೀಡುತ್ತಿದೆ. ಮಮತಾ ದೀದಿಯ ರಾಜಕಾರಣದ ನಡೆಗಳನ್ನು ಹತ್ತಿರದಿಂದ ನೋಡಿದವರಿಗೆ ದೀದಿಯ ಆಲೋಚನೆ ಯಾವ ಕಡೆಗಿದೆ ಎಂದು ಆಲೋಚಿಸುವುದು ಕಷ್ಟವಲ್ಲ. ಇನ್ನೊಂದೆಡೆ ಇದಕ್ಕೆ ಪೂರಕವಾಗಿ ತೃತೀಯ ರಂಗದ ಚಟುವಟಿಕೆಗಳು ಗರಿಗೆದರುತ್ತಿವೆ.
ಪಶ್ಚಿಮ ಬಂಗಾಳದ ಸಾರ್ವರ್ತಿಕ ವಿಧಾನಸಭಾ ಚುನಾವಣೆಗಳಾಗಿ ಆರು ತಿಂಗಳ ಬಳಿಕ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡ ಮಮತಾ ಬ್ಯಾನರ್ಜಿ, 2011ರ ವಿಧಾನಸಭಾ ಚುನಾವಣೆಯ ತನ್ನದೇ ದಾಖಲೆ ಮುರಿದು ಗೆಲುವಿನ ಅಂತರವನ್ನು 49 ಸಾವಿರದಿಂದ ೫೮ ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದಾಳೆ. ನೆನಪಿಡಿ ೨೦೧೧ರ ಚುನಾವಣೆಯಲ್ಲಿ ದೀದಿ ಸೆಡ್ಡು ಹೊಡೆದು ಗೆದ್ದಿದ್ದು ಪಶ್ಚಿಮ ಬಂಗಾಳವನ್ನು ಬರೋಬ್ಬರಿ ೩೪ ವರ್ಷ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಎಡರಂಗದ ವಿರುದ್ಧ, ಈ ಬಾರಿ ದೀದಿ ಸೊಕ್ಕು ಮುರಿದಿದ್ದು ಸೋಲೇ ಇಲ್ಲವೆಂದು ಮೆರೆಯುತ್ತಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯದ್ದು. ದೀದಿ ಸಾಮಾನ್ಯಳಲ್ಲ.
ಇನ್ನೊಂದೆಡೆ 2024ರಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಇಲ್ಲದ ವಿರೋಧ ಪಕ್ಷವನ್ನು ಅಥವಾ ತೃತೀಯ ರಂಗವನ್ನು ಕಲ್ಪಿಸಿಕೊಳ್ಳವುದೂ ಸಾಧ್ಯವಿಲ್ಲ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ತೃತೀಯ ರಂಗ ಬೆಂಬಲ ನೀಡುವ ಮಾತಾಡುತ್ತಿದೆ. ಚುನಾವಣೆ ನಡೆಯುವ 543 ಕ್ಷೇತ್ರಗಳ ಪೈಕಿ 200 ಸ್ಥಾನಗಳಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆ ನೇರವಾಗಿ ಸೆಣಸಲಿದೆ.
ಉಳಿದ ಕಡೆ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ನೇರವಾಗಿ ಎದುರಿಸುವ ಮೂಲಕ ನರೇಂದ್ರ ಮೋದಿಯ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಬೇಕು ಎಂಬರ್ಥದ ಮಾತಾಡುತ್ತಿದ್ದಾರೆ. ತೃತೀಯ ರಂಗಕ್ಕೆ ಹಿಂದಿದ್ದ ಬಲವಿಲ್ಲ, ಆದರೆ ಕಾಂಗ್ರೆಸ್ ಅದರ ತಳಹದಿಯಾದರೆ ಬಿಜೆಪಿಯ ತಾಕತ್ತು ಮುರಿಯಬಹುದು ಎನ್ನುವ ಆಲೋಚನೆ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ರದ್ದು.
ಕಳೆದ ಕೆಲವು ಸಮಯದಿಂದ ಕಾಂಗ್ರೆಸ್ ಮಿತ್ರಪಕ್ಷಗಳು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿವೆ. ಎನ್‌ಸಿಪಿ ಶರದ್ ಪವಾರ್ ಸಹ ಕಾಂಗ್ರೆಸ್ ಅನ್ನು ತೃತೀಯ ರಂಗದ ರಥದ ಕುದುರೆಯನ್ನಾಗಿಸಲು ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಪ್ರಯತ್ನಿಸುತ್ತಿದ್ದಾರೆ. ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಶಿವಸೇನೆ ಮತ್ತು ಎನ್‌ಸಿಪಿ ಕಾಂಗ್ರೆಸ್ ಜೊತೆ ಸಾಗುವ ಯೋಚನೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಶಿವಸೇನೆಯ ಸಂಜಯ್ ರಾವತ್ ಮತ್ತು ಪವಾರ್ ಪ್ರಶಾಂತ್ ಕಿಶೋರ್ ಜೊತೆ ಚರ್ಚೆ ನಡೆಸಿ ಚೆಂಡನ್ನು ರಾಹುಲ್ ಗಾಂಧಿ ಅಂಗಳಕ್ಕೆ ದೂಡಿವೆ.
ಪ್ರಧಾನಿ ಗಾಧಿಗೆ ಮಮತಾ ದೀದಿಯೇ ಏಕೆ?
ಟಿಎಂಸಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಇತ್ತೀಚೆಗಷ್ಟೇ ಹೇಳಿದ್ದನ್ನು ನೆನಪಿಸಿಕೊಳ್ಳಿ. 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದಿದ್ದಾರೆ ಬಾಬೂಲ್. ಈ ಬಾಬುಲ್ ಸುಪ್ರಿಯೋ ಕೆಲವೇ ಕಾಲದ ಹಿಂದೆ ಬಿಜೆಪಿಯಲ್ಲಿದ್ದವರು. ಅಸನ್ಸೋಲ್ ಸಂಸದರಾಗಿದ್ದವರು ರಾಜಕೀಯ ತ್ಯಜಿಸುವ ನಿರ್ಧಾರ ಪ್ರಕಟಿಸಿ ತಿಂಗಳು ಕಳೆಯುವ ಮೊದಲೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ದೀದಿಗೆ ಜೈ ಅಂದವರು. ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒಬ್ರೈನ್ ಮಧ್ಯಸ್ಥಿಕೆಯಲ್ಲಿ ಬಿಜೆಪಿಗೆ ಗುಡ್‌ಬೈ ಹೇಳಿ ತೃಣಮೂಲ ಕಾಂಗ್ರೆಸ್ ಬಾಗಿಲು ಬಡಿದಿದ್ದ ಮಾಜಿ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಟಿಎಂಸಿ ಮುಖವಾಣಿ ʻಜಾಗೋ ಬಾಂಗ್ಲಾ’ ಈ ಕುರಿತು ಸುಪ್ರಿಯೋ ಹೇಳಿಕೆಯನ್ನು ವರದಿ ಮಾಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಪರ್ಯಾಯ ಮುಖವಾಗಲು ವಿಫಲರಾಗಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಪ್ರಧಾನಿ ಮೋದಿಗೆ ಏಕೈಕ ಸಂಭಾವ್ಯ ಪರ್ಯಾಯ ಎಂದಿದ್ದಾರೆ ಬಾಬುಲ್.
ದಿನೇ ದಿನೇ ಸರ್ವಾಧಿಕಾರಿಯಾಗಿ ಬೆಳೆಯುತ್ತಿರುವ ಬಿಜೆಪಿಯ ಅನಾಹುತಕಾರಿ ನಡೆಗಳು, ಮೈತುಂಬಾ ಕಾಯಿಲೆಗಳಿರುವ ಚಾರಿತ್ರಿಕ ಪಕ್ಷ ಕಾಂಗ್ರೆಸ್‌ನ ಅಪಕ್ವ ಬಾಲೀಶ ನಿರ್ಧಾರಗಳ ನಡುವೆ ದೇಶಕ್ಕೆ ಈಗ ಉಳಿದಿರುವ ಭರವಸೆಯೇ ತೃತೀಯ ರಂಗ. ಅದರಲ್ಲೂ ಇತ್ತೀಚೆಗೆ ಒಂಟಿ ಕಾಲಿನಲ್ಲಿ ʻಖೇಲಾ ಹೂಬೆʼ ಎನ್ನುತ್ತಾ ಚೆಂಡನ್ನೊದ್ದು ಪ್ರಧಾನಿಗಳ ಮಕಾಡೆ ಮಲಗಿಸಿ ಗೆದ್ದು ಬೀಗಿದ ದೀದಿ. ಮೊನ್ನೆ ಮೊನ್ನೆ ನಡೆದ ಬಂಗಾಳದ ಚುನಾವಣೆಯಲ್ಲಿ ಕೇಂದ್ರದ ಕಮಲ ನಾಯಕರಿಗೆ ಕೆರೆ ನೀರು ಕುಡಿಸಿದ ಬೆಂಗಾಳಿ ಕಾಳಿ ತಾನು ಭವಿಷ್ಯದ ಭಾವಿ ಪ್ರಧಾನ ಮಂತ್ರಿ ಅನ್ನುವ ಸೂಚನೆಯನ್ನು ರವಾನಿಸಿದ್ದಾಳೆ. ಕುಸಿಯುತ್ತಿರುವ ಮೋದಿ ಅಲೆ, ಕಾಂಗ್ರೆಸ್‌ನ ಸರ್ವನಾಶದ ಮುನ್ಸೂಚನೆ, ಎಡರಂಗದ ಹೀನ ರಾಜಕಾರಣ ಎಷ್ಟೆಲ್ಲಾ ಕಥೆ ಹೇಳಿತ್ತು ಆ ಚುನಾವಣೆ, ಅದರ ಒಟ್ಟಾರೆ ಔಟ್ ಪುಟ್ ಮಮತಾ ಬ್ಯಾನರ್ಜಿ ಎಂಬ ಗಟ್ಟಿಗಿತ್ತಿಯ ಬ್ರಾಂಡಿಂಗ್.
ತೃತೀಯ ರಂಗ ಅನ್ನುವ ಅತೃಪ್ತರ ಕೂಟವನ್ನು ತನ್ನ ಒಂದು ಮಾತಿನಲ್ಲಿ ಕಟ್ಟಿ ಹಾಕಬಲ್ಲ ಎದೆಗಾರಿಕೆ ದೀದಿಗಿದೆ. ಮಮತಾ ಬ್ಯಾನರ್ಜಿ ಭವಿಷ್ಯದಲ್ಲಿ ತೊಡಕಾಗಬಹುದು ಅನ್ನುವ ಮುನ್ಸೂಚನೆ ಇದ್ದಿದ್ದರಿಂದಲೇ ಕೇಂದ್ರ ಸರ್ಕಾರ ತನ್ನೆಲ್ಲಾ ಅಧಿಕಾರ ಯಂತ್ರವನ್ನು, ಆಡಳಿತದ ಫಿರಂಗಿಯನ್ನು ಪಶ್ಚಿಮ ಬಂಗಾಳದ ಕಡೆಗೆ ತಿರುಗಿಸಿ ನಿಲ್ಲಿಸಿತ್ತು. ಪ್ರಾಯಶಃ ಆ ಚುನಾವಣೆ ಮಮತಾ ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿತ್ತು. ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಹೆಚ್ಚಿನ ಕಸವು, ಪರಿಶ್ರಮ ಮತ್ತು ರಕ್ತ ಸಹಿತ ಬೆವರು ಹರಿಸಬೇಕಾಯಿತು ಮಮತಾ ಮಾಯಿ. ಅದರ ಪರಿಣಾಮ 294 ಸ್ಥಾನಗಳ ವಿಧಾನಸಭೆ ಚುನಾವಣೆಯಲ್ಲಿ ಸಿಡಿಲಮರಿ, ಉರಿಮಾರಿ ಮಮತಾ ದೀದಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಯಾವಾಗ ತನ್ನ ವಿಶ್ವಾಸಿ ಸುವೇಂದು ವಿಶ್ವಾಸ ದ್ರೋಹವೆಸಗಿದರೋ ಆಗಲೇ ದೀದಿ ತನ್ನ ಭವಾನಿಪುರ ಕ್ಷೇತ್ರವನ್ನು ಚಟ್ಟೋಪಾಧ್ಯಾಯ ಅವರಿಗೆ ಬಿಟ್ಟುಕೊಟ್ಟು, ಹಠ ತೊಟ್ಟು ನಂದಿಗ್ರಾಮವನ್ನೇ ತನ್ನ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡ ಕಣಕ್ಕಿಳಿದರು. ತನ್ನ ವಿಶ್ವಾಸಕ್ಕೆ ಧಕ್ಕೆ ಮಾಡಿದ ಸುವೇಂದು ಅಧಿಕಾರಿಯನ್ನು ರಾಜಕೀಯವಾಗಿ ಮುಗಿಸದೇ ಬಿಡಲಾರೆ ಎನ್ನುವ ಛಲ ದೀದಿಯಲ್ಲಿ ಕಂಡುಬಂತು. ನೆನಪಿರಲಿ ಇದೇ ಸುವೇಂದು ಅಧಿಕಾರಿಯ ತಂದೆಯ ಕಾಲದಿಂದಲೂ ನಂದಿಗ್ರಾಮ ಅವರ ಕುಟುಂಬದ್ದೇ ಜಾಗೀರು. ಆದರೂ ಕುತ್ತಿಗೆ ಮಟ್ಟದಲ್ಲಿ ಫೈಟ್ ನೀಡಿದ ದೀದಿ ಸೋತರೂ ಅದರ ಹಿಂದೆ ಕಾನ್ಸ್‌ಪಿರಸಿ ವಾಸನೆ ಬಂದಿತ್ತು. ಸೋಲುವ ನಿರೀಕ್ಷೆ ಇದ್ದರೂ ನಂದಿಗ್ರಾಮದಲ್ಲೇ ಚಂಡಿ ಹಿಡಿದು ಕೂತುಬಿಟ್ಟಳು ದೀದಿ. ಹಿಡಿದ ಹಠ ಸಾಧಿಸಿಯೇ ತೀರುವ ಜಿದ್ದು ಮಮತಾ ದೀದಿಯ ಪ್ರಭೆಯನ್ನು ಉಜ್ವಲಗೊಳಿಸಿದೆ. ಇಂತದ್ದೊಂದು ಜಿದ್ದು ಇಂದಿರಾ ಪ್ರಿಯದರ್ಶಿನಿಯಲ್ಲಿತ್ತು.
ಆ ಚುನಾವಣೆಯಲ್ಲಿ ದೀದಿ ವಿರುದ್ಧ ಇಡೀ ಕೇಂದ್ರ ಸರ್ಕಾರವೇ ತನ್ನೆಲ್ಲಾ ಸೈನ್ಯವನ್ನೇ ಸಜ್ಜುಗೊಳಿಸಿ ಬಂಗಾಳಕ್ಕೆ ಕೊಂಡೊಯ್ದಿತ್ತು. ಕನಿಷ್ಟ ಒಂದು ಹೆಣ್ಣು ಎಂದೂ ನೋಡದೇ ಪ್ರಧಾನಿಗಳ ಸಹಿತ ಸಂಸ್ಕೃತಿ ರಕ್ಷಕರ ಪಕ್ಷದ ಪ್ರತಿಯೊಬ್ಬ ಪುಢಾರಿಯೂ ವೇದಿಕೆ ಸಿಕ್ಕಲ್ಲೆಲ್ಲಾ ಮಮತಾ ಬ್ಯಾನರ್ಜಿಯವರನ್ನು ಹಣಿದಿದ್ದೇನು! ಕೊಲೆಗಡುಕಿ ಎಂದು ಹಣೆಪಟ್ಟಿ ಕಟ್ಟಿದ್ದೇನು! ದೀದಿ ಓ ದೀದಿ ಎಂದು ಪಡ್ಡೆ ಹುಡುಗರಂತೆ ಅಣಕಿಸಿದ್ದೇನು! ಅಂತೂ ಕೊನೆಗೂ ಆದದ್ದೇನು? ಪ್ರಧಾನಿಗಳು ಗಡ್ಡ ಬಿಟ್ಟಿದ್ದಷ್ಟೇ ಲಾಭ. ಗಡ್ಡ ಬಿಟ್ಟವರೆಲ್ಲರೂ ಬಂಗಾಳದ ಅಸ್ಮಿತೆ ರವೀಂದ್ರನಾಥ ಠ್ಯಾಗೋರ್ ಆಗುವುದಿಲ್ಲ ಎನ್ನುವ ಮಾತನ್ನು ಬೆಂಗಾಳಿಗಳು ಸರಿಯಾದ ಮಂಗಳಾರತಿ ಸಹಿತ ಆಡಿ ಕಳಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯ ಮಮತಾ ಬ್ಯಾನರ್ಜಿಯನ್ನು ಸೋಲಿಸಲೇಬೇಕು ಎಂದು ಪ್ರಧಾನಿಗಳ ಸಹಿತ ಗೃಹ ಸಚಿವ ಸೋ ಕಾಲ್ಡ್ ಚುನಾವಣಾ ಚಾಣಾಕ್ಯ ಅಮಿತ್ ಶಾ, ರಾಜನಾಥ್ ಸಿಂಗ್, ಯುಪಿಯ ಯೋಗಿ ಆದಿತ್ಯನಾಥ್, ಕಮಲ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮುಂತಾಗಿ ಕೇಂದ್ರದ ಹಲವು ಪ್ರಭಾವಿ ನಾಯಕರು, ಕೇಂದ್ರ ಸರ್ಕಾರದ ಮಂತ್ರಿಗಳು 300 ಬಹಿರಂಗ ಪ್ರಚಾರ ಸಭೆಗಳನ್ನು ನಡೆಸಿದ್ದರು. ಎರಡು ರೂಪಾಯಿ ಗಿರಾಕಿಗಳಾದ ಭಕ್ತ ಗಣಗಳು ತಾವೇನೂ ಕಡಿಮೆ ಇಲ್ಲವೆಂದು, ಮಮತಾ ತೇಜೋವಧೆಯ ಅಳಿಲು ಸೇವೆಗೆ ಟೊಂಕಕಟ್ಟಿ ನಿಂತರು. ಖುದ್ದು ಪ್ರಧಾನಿಗಳೇ 20ಕ್ಕೂ ಹೆಚ್ಚು ಬೃಹತ್ ರ್ಯಾಲಿಯಲ್ಲಿ ಮಾತಾಡಿದ್ದರು. ಬರೋಬ್ಬರಿ 160 ರೋಡ್ ಶೋಗಳನ್ನು ಬಿಜೆಪಿ ನಡೆಸಿತು. 200 ಸ್ಥಾನ ಗೆದ್ದೇ ತೀರುತ್ತೀವಿ ಎಂದು ಆತ್ಮವಿಶ್ವಾಸದಲ್ಲಿ ಬೀಗುತ್ತಿತ್ತು ಬಿಜೆಪಿ.
ಮತ್ತೆ ಗದ್ದುಗೆ ಏರಲು ದೀದಿಗೆ ಬೇಕಿದ್ದಿದ್ದು ಮ್ಯಾಜಿಕ್ ನಂಬರ್ 147, ಆದರೆ ಬಂಗಾಳದ ಅಸ್ಮಿತೆಯ ಟ್ಯಾಗ್ ಲೈನ್ ಅಡಿ ಮತದಾರರು ದೊರಕಿಸಿಕೊಟ್ಟಿದ್ದು 215. ಬಂಗಾಳದಲ್ಲಿ ಅಧಿಕಾರವನ್ನು ದಕ್ಕಿಸಿಕೊಂಡೇ ತೀರುತ್ತೇವೆ ಎಂದು ಶಪಥ ಮಾಡಿದ್ದ ಬಿಜೆಪಿ ೨೦೦ ಸ್ಥಾನಗಳನ್ನು ಗೆಲ್ಲುವ ಹುಕಿಯಲ್ಲಿತ್ತು. ಮಮತಾ ಆಪ್ತ ಸುವೇಂದು ಅಧಿಕಾರಿಯ ಸಹಿತ 79 ಟಿಎಂಸಿ ನಾಯಕರನ್ನು ರಾತ್ರೋ ರಾತ್ರಿ ಕೇಸರಿ ಶಾಲು ಹಾಕಿ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು. ತೆರೆಮರೆಯಲ್ಲಿ ಇಷ್ಟೆಲ್ಲಾ ಷಡ್ಯಂತ್ರಗಳನ್ನು ನಡೆಸಿ, ಬಹಿರಂಗವಾಗಿ ಮಮತಾರನ್ನು ವಾಚಾಮಗೋಚರ ನಿಂದಿಸಿ, ಹಿಂದೂಗಳು ಅಪಾಯದಲ್ಲಿದ್ದಾರೆ, ದೀದಿ ಜಿಹಾದಿ, ಮತಾಂತರಿಗಳ ಪರ ಎಂದೆಲ್ಲಾ ಅಪಪ್ರಚಾರ ನಡೆಸಿದರೂ ಕಮಲನಾಯಕರ ಬುಟ್ಟಿಗೆ ಬಿದ್ದಿದ್ದು ಕೇವಲ ೭೫ ಸ್ಥಾನ. ಅವೂ ಸಹ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಆಪರೇಷನ್ ಕಮಲದ ಮೂಲಕ ಪಕ್ಷಾಂತರ ಮಾಡಿ ಚುನಾವಣೆ ನಿಂತು ಗೆದ್ದ (ಕುದುರೆಗಳಲ್ಲ) ಕುರಿಗಳು ಅಷ್ಟೆ. ದೀದಿಯ ಸೋಲಿಗೆ ಖೆಡ್ಡಾ ತೋಡಿ ಕುದುರೆ ವ್ಯಾಪಾರ ಮಾಡಿ, ಹಣದ ಹೊಳೆಯನ್ನೇ ಹರಿಸಿ, ಕ್ಷುಲ್ಲಕ ಕಾರಣಕ್ಕೆ ರಕ್ತದ ಕೋಡಿ ಹರಿಸಿ, ಇಲ್ಲಸಲ್ಲದ ತಲೆಬುಡವಿಲ್ಲದ ಕಪೋಲಕಲ್ಪಿತ ಸುಳ್ಳು ಅಪಪ್ರಚಾರಗಳನ್ನೇ ಚುನಾವಣಾ ಪ್ರಚಾರಭಾಷಣವನ್ನಾಗಿಸಿ ಏನೆಲ್ಲಾ ಸರ್ಕಸ್ ಮಾಡಿದರೂ ಕನಿಷ್ಟ 100ರ ಗಡಿ ದಾಟಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಎದುರಲ್ಲಿದ್ದಿದ್ದು ಬೆಂಗಾಳಿ ಕಾಳಿ. ದೀದಿಯಲ್ಲಿ ಇದೇ ಛಲ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದರೆ ಹೆಹಲಿಯ ಗದ್ದುಗೆ ದೀದಿ ಪಾಲಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.
ತೃತೀಯ ರಂಗದ ರಥಕ್ಕೆ ಎಷ್ಟು ಕುದುರೆ ಕಟ್ಟುತ್ತಾರೆ ಪ್ರಶಾಂತ್ ಕಿಶೋರ್?
ಇನ್ನು ತೃತೀಯ ರಂಗದ ನಾಯಕರುಗಳಾದ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಲಾಲೂ ಪ್ರಸಾದ್ ಯಾದವ್, ಅರವಿಂದ್ ಕೇಜ್ರೀವಾಲ್, ಹೆಚ್. ಡಿ ದೇವೇಗೌಡ, ಕುಮಾರಸ್ವಾಮಿ ಮುಂತಾದವರು ಒಟ್ಟಾಗಿ ಮಮತಾ ದೀದಿಯನ್ನು ಮುಂದಿಟ್ಟುಕೊಂಡು ಲೋಕ ಚುನಾವಣೆ ಎದುರಿಸುವ ಆಲೋಚನೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಚುನಾವಣೆಗೆ ಮೊದಲೇ ನಿತೀಶ್ ಕುಮಾರ್‌ರ ಜೆಡಿಯು, ಓರಿಸ್ಸಾದ ನವೀನ್ ಪಾಟ್ನಾಯಕ್, ತಮಿಳಿನಾಡಿನ ಡಿಎಂಕೆ ಸ್ಟಾಲಿನ್, ಆಂಧ್ರದಲ್ಲಿ ಜಗನ್ ರೆಡ್ಡಿ ಜೊತೆ ನಿರ್ಣಾಯಕ ಮಾತುಕಥೆ ನಡೆಸುವ ತೀರ್ಮಾನವಾಗಿದೆ ಎನ್ನಲಾಗುತ್ತಿದೆ. ಒನ್ಸ್ ಎಗೈನ್ ಈ ಎಲ್ಲಾ ನಾಯಕರನ್ನು ಪ್ರಶಾಂತ್ ಕಿಶೋರ್ ಮೂಲಕ ಸಂಪರ್ಕಿಸುವ ಇರಾದೆಯನ್ನು ತೃತೀಯ ರಂಗದ ನಾಯಕರು ಇಚ್ಛಿಸಿದ್ದಾರೆ.
ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ, ನಿತೀಶ್ ಕುಮಾರ್‌ರ ಜೆಡಿಯು, ಆಂಧ್ರದಲ್ಲಿ ಜಗನ್‌ಮೋಹನ್ ರೆಡ್ಡಿಯ ವೈಎಸ್‌ಆರ್ ಕಾಂಗ್ರೆಸ್ ಮತ್ತು ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ-ಸಿಪಿಎಂ ಮೈತ್ರಿಕೂಟ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸಿದ್ದೇ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್. ಈ ನಿಟ್ಟಿನಲ್ಲಿ ತಾನು ಕೆಲಸ ಮಾಡಿದ ಎಲ್ಲಾ ನಾಯಕರನ್ನು ಒಂದೇ ವೇದಿಕೆಗೆ ಕರೆತಂದು ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರಕ್ಕೇರಿಸುವ ಹೊಣೆ ಪ್ರಶಾಂತ್ ಕಿಶೋರ್ ಮೇಲಿದೆ. ಈ ನಡುವೆ ಪಂಜಾಬ್‌ನಲ್ಲಿಯೂ ಕ್ಯಾಪ್ಟನ್ ಅಮರೀಂದರ್ ಜೊತೆ ತೃತೀಯ ರಂಗದ ನಾಯಕರು ಮಾತುಕಥೆಗೆ ಪ್ರಯತ್ನಿಸುತ್ತಿದ್ದಾರೆ. ಕ್ಯಾಪ್ಟನ್ ಬಿಜೆಪಿ ಸಖ್ಯ ಬೆಳೆಸದಂತೆ ತಡೆಯುವುದು ಫೆಡರಲ್ ನಾಯಕರ ಸದ್ಯದ ಮುಖ್ಯವಾದ ಗುರಿಯಾಗಿದೆ. ಈಗ ಆಟ ಮಜಭೂತಾಗಿದೆ.
ಇನ್ನೊಂದು ಕಡೆ ಮುಂಬರುವ ಲೋಕಸಭಾ ಚುನಾವಣೆಯ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳ ವರಿಷ್ಠರೊಂದಿಗೆ ಪ್ರಶಾಂತ್ ಕಿಶೋರ್ ಮಾತುಕಥೆ ಸಫಲವಾದರೆ, ಉತ್ತರ ಪ್ರದೇಶದ ೮೦ ಲೋಕಸಭಾ ಸ್ಥಾನಗಳು, ಮಹಾರಾಷ್ಟ್ರದ ೪೮, ಬಿಹಾರದ ೪೦, ತಮಿಳುನಾಡಿನ ೩೯, ಪಶ್ಚಿಮ ಬಂಗಾಳದ ೪೨, ಆಂಧ್ರದ ೨೫, ಪಂಜಾಬಿನ ೨೦, ತೆಲಂಗಾಣದ ೧೭ ಸ್ಥಾನಗಳು ನಿರ್ಣಾಯಕವಾಗುತ್ತವೆ. ಇವಿಷ್ಟು ರಾಜ್ಯಗಳನ್ನೂ ಹೊರತು ಪಡಿಸಿ ಉಳಿದೆಡೆ ಕಾಂಗ್ರೆಸ್ ಬಿಜೆಪಿಗೆ ನೇರ ಮುಖಾಮುಖಿಯಾಗಿ ಒಂದಷ್ಟು ಸ್ಥಾನಗಳಿಸಿಕೊಂಡರೆ ಫಲಿತಾಂಶ ಖಂಡಿತಾ ಮೋದಿಗಿರಿಯ ಅಧಿಪತ್ಯವನ್ನು ಉರುಳಿಸುವಂತದ್ದಾಗುತ್ತದೆ ಎನ್ನುವುದು ಇಲ್ಲಿನ ಸರಳ ಲೆಕ್ಕಾಚಾರ.
ಒಂದು ವೇಳೆ ದೀದಿ ಪಶ್ಚಿಮ ಬಂಗಾಳದಲ್ಲಿ ಮೂರನೆ ಎರಡು ಭಾಗ ಸ್ಥಾನಗಳನ್ನು ಪಡೆದುಕೊಂಡರೂ ಸಾಕು ಪ್ರಧಾನಿಯಾಗಲು ಉಳಿದ ನಾಯಕರು ಅಡ್ಡಗಾಲು ಹಾಕಲಾರರು. ದೀದಿ ಕೂಡಾ ತನ್ನ ಯಾವುದೇ ಆಲೋಚನೆಗಳನ್ನೂ ಹೊರಹಾಕದೆ ತಣ್ಣಗೆ ಸ್ಟ್ರಾಟೆಜಿ ರೂಪಿಸುತ್ತಿದ್ದಾಳೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹೇಗೆ ಬ್ರಾಂಡ್ ಆಗಿ ಈ ದೇಶದ ಚುಕ್ಕಾಣಿ ಹಿಡಿದರೂ ಅದೇ ಮಾದರಿಯಲ್ಲಿ ಮಮತಾ ದೀದೀ ಕೂಡಾ ತನ್ನ ದಾಳವನ್ನು ಉರುಳಿಸಲು ಸಮಯ ಕಾಯುತ್ತಿದ್ದಾಳೆ. ಸದ್ಯದ ಮಟ್ಟಿಗೆ ತೃತೀಯ ರಂಗಕ್ಕೂ ದೀದಿ ಮಾತ್ರವೇ ಅಂತಿಮ ಭರವಸೆಯಾಗಿ ಉಳಿದಿರುವ ಕಾರಣ ಮುಲಶಾಯಂ, ಲಾಲೂ, ಶರದ್ ಪವರ್, ದೇವೇಗೌಡರಂತಹ ಹಿರಿಯ ನಾಯಕರೂ ದೀದಿಯನ್ನು ಒಪ್ಪಿಕೊಳ್ಳದೇ ಬೇರೆ ವಿಧಿಯಿಲ್ಲ. ರಾಜಕಾರಣದಲ್ಲಿ ಯಾವುದೂ ಅಸಂಭವವಲ್ಲ. ನಮ್ಮ ದೇವೇಗೌಡರೇ ೧೭ ಸೀಟುಗಳನ್ನು ಇಟ್ಟುಕೊಂಡು ದೆಹಲಿಯ ಅಧಿಪತ್ಯ ನಡೆಸಲಿಲ್ಲವೇ. ಹಾಗಿದ್ದಾಗ ರಾಜಕೀಯದ ಉಪ್ಪು, ಕ್ಷಾರ, ಸಿಹಿ ನೀರುಗಳನ್ನು ಸಮಾನವಾಗಿ ಕುಡಿದ ದೀದಿಗೆ ಯಾಕೆ ಸಾಧ್ಯವಿಲ್ಲ?
ಹಾಗಂತ ಮಮತಾ ದೀದಿಯ ಸರ್ವಾಧಿಕಾರಿ ವರ್ತನೆ ನಿಯಂತ್ರಣಕ್ಕೆ ಬರದಿದ್ದರೇ ಭವಿಷ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸೂಚನೆ ಇಲ್ಲದಿಲ್ಲ. ನಾವು ಇಂದಿರಾ ಗಾಂಧಿಯ ಜಿದ್ದನ್ನು ಕೇಳಿಯಷ್ಟೆ ಬಲ್ಲೆವು ಆದರೆ ಮಮತಾ ಬ್ಯಾನರ್ಜಿ ಎನ್ನುವ ಹೆಂಗಸು ಇಂದಿರಾ ಪ್ರಿಯದರ್ಶಿನಿಯವರನ್ನು ಮೀರಿಸಬಲ್ಲ ಸರ್ವಾಧಿಕಾರಿಯಾಗಬಲ್ಲಳು. ಮೋದಿ ಬರುವ ಮೊದಲೂ ಒಬ್ಬ ಆಟೋಕ್ರಾಟ್ ಈ ದೇಶಕ್ಕೆ ಬೇಕು ಎನ್ನುವ ಮಾತುಗಳಿದ್ದವು. ಮಮತಾ ಮೋದಿಯನ್ನು ಮೀರಿಸುವ ಡಿಕ್ಟೇಟರ್ ಆಗಬಹುದು. ಆದರೆ ಆ ಸರ್ವಾಧಿಕಾರಿ ಧೋರಣೆ ದೇಶದ ಪಾಲಿಗೆ ಎಷ್ಟು ಪೂರಕ ಎಷ್ಟು ಮಾರಕ ಅನ್ನುವುದು ಮಾತ್ರ ಕಾಲವೇ ನಿರ್ಧರಿಸಬೇಕು.
-ವಿಶ್ವಾಸ್ ಭಾರದ್ವಾಜ್