ಪತಿರಾಯನೊಬ್ಬ ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು, ಸ್ನೇಹಿತರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದೆ. ಹೇಮಂತ್ ಶರ್ಮಾ ಎಂಬ ವ್ಯಕ್ತಿಯೇ ಸ್ನೇಹಿತನಿಗೆ 2.5 ಲಕ್ಷ ರೂ. ನೀಡಿ ಹತ್ಯೆಗೆ ಸುಫಾರಿ ನೀಡಿದ್ದ ಎನ್ನಲಾಗಿದೆ. ಆರಂಭದಲ್ಲಿ ರಸ್ತೆ ಅಪಘಾತದಂತೆ ಕಂಡುಬಂದ ಈ ಘಟನೆಯು ಆಗಸ್ಟ್ 13ರಂದು ನಡೆದಿತ್ತು. ಆನಂತರ ಪೊಲೀಸರು ತನಿಖೆಯಲ್ಲಿ ಸತ್ಯ ಹೊರ ಹಾಕಿದ್ದಾರೆ.
ಪೊಲೀಸರ ಪ್ರಕಾರ ಶರ್ಮಾ, ಪತ್ನಿ ಕೊಲೆಯನ್ನು ರಸ್ತೆ ಅಪಘಾತದಂತೆ ಬಿಂಬಿಸಿದ್ದ. ಘಟನೆ ದಿನದಂದು ಪತ್ನಿಯನ್ನು ಆಕೆಯ ಸಹೋದರ ಸಂದೇಶ್ ದೇವಸ್ಥಾನಕ್ಕೆ ಕರೆದೊಯ್ದಿದ್ದ. ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದಾಗ ಶರ್ಮಾ ಸ್ನೇಹಿತನಿದ್ದ ಇಕೋಸ್ಪೋರ್ಟ್ಸ್ ಕಾರು, ಬೈಕ್ಗೆ ಡಿಕ್ಕಿ ಹೊಡೆದಿದೆ.
ಮಹಿಳೆ ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸಂದೇಶ್‌ಗೆ ಗಾಯಗಳಾಗಿವೆ. ಶರ್ಮಾ ಇದನ್ನು ಹಿಟ್ ಆ್ಯಂಡ್ ರನ್ ಎಂದು ಹೇಳಿದ್ದ. ನಂತರ ಸಿಸಿಟಿವಿ ದೃಶ್ಯಗಳಲ್ಲಿ ಶರ್ಮಾ ಹೇಳಿರುವ ರೀತಿಯ ವಾಹನ ಕಾಣಿಸದಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಪತ್ನಿ ವಿಪರೀತ ಖರ್ಚು ಮಾಡುತ್ತಿರುವುದಕ್ಕೆ ಬೇಸತ್ತು ಪತಿ ಈ ರೀತಿ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಸಂಚಿನಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ.