ಕೊಪ್ಪಳ : ಬೆಂಗಳೂರು ಡಿಜೆ ಹಳ್ಳಿ ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ. ಗೃಹ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಕ್ಕೆ ಕಾನೂನು ಸಚಿವ ಮಾಧುಸ್ವಾಮಿ, ಗುಪ್ತಚರ ಇಲಾಖೆಯಲ್ಲಿ ಇರೋದು ಮನುಷ್ಯರೇ ಎಂದು ಟಾಂಗ್ ಕೊಟ್ಟಿದ್ದಾರೆ.
ಕುಷ್ಟಗಿಯ ಕಡೇಕೊಪ್ಪದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂತಹ ಪರಸ್ಥಿತಿ ನಿರ್ಮಾಣ ಆಗುತ್ತೆ ಎಂದು ಯಾರೂ ನೀರಿಕ್ಷೆ ಮಾಡಿರಲಿಲ್ಲ. ಗುಪ್ತಚರ ಇಲಾಖೆಯಲ್ಲಿ ಇರೋದು ಮನುಷ್ಯರೇ. ಒಂದೇ ಸಲ 3-4 ಸಾವಿರ ಬರ್ತಾರೆ ಅನ್ನೋದು ಗೊತ್ತಾಗಲ್ಲ. ಯಾವನೋ ಪೋಸ್ಟ್ ಮಾಡಿದ್ರೆ, 4 ಸಾವಿರ ಜನ ಬರುತ್ತಾರೆ ಅನ್ನೋದು ಗೊತ್ತಾಗಲ್ಲ. ಸಾರಾ ಮಹೇಶ್ ಏನ್ ಮಾಡಿದ್ರೂ ದೂರುತ್ತಾರೆ. ರಾಜ್ಯದಲ್ಲಿ ಇವರೊಬ್ಬರೇ ಮೇಧಾವಿ ಅಂದುಕೊಂಡಿದ್ದಾರೆ. ಇದಕ್ಕೆ ನಾವೇನ್ ಮಾಡೋಕೆ ಆಗಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಮಾಧುಸ್ವಾಮಿ, ಕಾಂಗ್ರೆಸ್ಸಿವರು ಅವರ ಪಕ್ಷದ ಶಾಸಕರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಘಟನೆಗೆ ಬಿಜೆಪಿಯವರು ಕಾರಣ ಅನ್ನೋದೇ ಆದರೆ ಅವರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡಲಿ. ಒಂದು ವೇಳೆ ಗಲಭೆಯಲ್ಲಿ ಬಿಜೆಪಿಯವರು ಇದ್ದರೂ ನಾವು ಅವರನ್ನು ಒಳಗೆ ಹಾಕ್ತೀವಿ ಎಂದರು.