ಪತ್ನಿ ಜೊತೆಗಿನ ಜೀವನಕ್ಕಿಂತ ಜೈಲೇ ವಾಸಿ… ಜೈಲಿನಿಂದ ಕಳಹಿಸಬೇಡಿ ಎಂದು ಕೈದಿಯ ಮನವಿ
ರೋಮ್ : ಮಹಿಳೆಯರಷ್ಟೇ ಅಲ್ಲ ಪುರುಷರಮೇಲೂ ದೌರ್ಜನ್ಯಗಳು , ಮಾನಸಿಕ , ಲೈಂಗಿಕ ಕಿರುಕುಳ , ದೈಹಿಕ ಹಿಂಸೆಗಳು ನಡೆಯುತ್ವೆ. ಆದ್ರೆ ಅಷ್ಟಾಗಿ ಅದು ಬೆಳಕಿಗೆ ಬರೋದಿಲ್ಲ. ಆ ಪ್ರಕರಣ ಅಷ್ಟು ಮಹತ್ವವನ್ನೂ ಪಡೆದುಕೊಳ್ಳದ ಕೆಲ ಉದಾಹರಣೆಗಳಿವೆ. ಆದ್ರೆ ಇಟಲಿಯಲ್ಲಿನ ಈ ಘಟನೆ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಡ್ರಗ್ಸ್ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಟಲಿಯ ವ್ಯಕ್ತಿಯೊಬ್ಬ ಈಗ ತನ್ನನ್ನ ಜೈಲಿನಲ್ಲಿರಿಸಿಕೊಳ್ಳಿ ಜೈಲಿನಲ್ಲೇ ಉಳಿದುಕೊಳ್ಳುತ್ತೇನೆಂದು ಹಠ ಹಿಡಿದಿದ್ದಾನೆ.
ಹೌದು.. ನನ್ನನ್ನು ಜೈಲಿನಲ್ಲೇ ಬಂಧಿಸಿ, ಮನೆಗೆ ಕಳುಹಿಸಬೇಡಿ ಎಂದು ಈತ ಪೊಲೀಸರ ಬಳಿ ಮನವಿ ಸಲ್ಲಿಸುತ್ತಿದ್ದಾನಂತೆ. ಆದ್ರೆ ಪೊಲೀಸರು ಆತನ ಮಾತನ್ನ ಒಪ್ಪಿಲ್ಲ. ಅಷ್ಟಕ್ಕೂ ಈ ನಿರ್ಧಾರಕ್ಕೆ ಆತನ ಕಾರಣ ಕೇಳಿ ಪೊಲೀಸರಿಗೂ ಆಶ್ಚರ್ಯವಾಗಿದೆಯಂತೆ. ಈತನಿಗೆ ಪತ್ನಿಯೊಂದಿಗೆ ಮನೆಯಲ್ಲಿ ಇರಲು ಇಷ್ಟ ಇಲ್ಲವಂತೆ. ಪತ್ನಿ ಜೊತೆಗೆ ಮನೆಯಲ್ಲಿರೋದು ನರಕವಂತೆ.. ಆಕೆ ಜೊತೆಗೆ ಮನೆಯಲ್ಲಿರೋದಕ್ಕಿಂತಲೂ ಜೈಲಿನಲ್ಲಿರೋದೇ ವಾಸಿಯಂತೆ. ಹೀಗಾಗಿ ಜೈಲಿನಲ್ಲಿ ಇರುತ್ತೇನೆಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾನಂತೆ.
ಗೈಡೋನಿಯಾ ಮಾಂಟೆಸೆಲಿಯೊದಲ್ಲಿ ವಾಸವಾಗಿರುವ 30 ವರ್ಷದ ಅಲ್ಬೇನಿಯನ್ ಎಂಬ ವ್ಯಕ್ತಿ ಅಕ್ಟೋಬರ್ 23ರಂದು ಪೊಲೀಸ್ ಠಾಣೆಗೆ ಆಗಮಿಸಿ, ಇನ್ನು ಮುಂದೆ ನನ್ನ ಹೆಂಡತಿಯೊಂದಿಗೆ ಗೃಹ ಬಂಧನದಲ್ಲಿ ಇರುವುದಿಲ್ಲ. ಹೆಂಡತಿಯೊಂದಿಗೆ ಬಲವಂತದ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದಾನೆ ಎಂದು ಕ್ಯಾರಾಬಿನಿಯೇರಿ ಪೊಲೀಸರು ತಿಳಿಸಿದ್ದಾರೆ. ಈ ವ್ಯಕ್ತಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಗೃಹಬಂಧನದಲ್ಲಿದ್ದನು. ಅವನ ಶಿಕ್ಷೆಯ ಅವಧಿ ಇನ್ನೂ ಮುಗಿದಿಲ್ಲ ಎಂದು ಟಿವೊಲಿ ಕ್ಯಾರಾಬಿನಿಯೇರಿಯ ಕ್ಯಾಪ್ಟನ್ ಫ್ರಾನ್ಸಿಸ್ಕೊ ಜಿಯಾಕೊಮೊ ಫೆರಾಂಟೆ ಹೇಳಿದ್ದಾರೆ.
ನನ್ನ ಮನೆ ಜೀವನ ನರಕವಾಗಿದೆ. ನಾನು ಅಲ್ಲಿಗೆ ಹೋಗಲು ಬಯಸುವುದಿಲ್ಲ. ನಾನು ಜೈಲಿಗೆ ಹೋಗುತ್ತೇನೆ ಎಂದು ಪೊಲೀಸರಲ್ಲಿ ಆ ವ್ಯಕ್ತಿ ಮನವಿ ಮಾಡಿದ್ದಾನೆ. ಅಲ್ಲದೇ ಈತನನ್ನ ಜೈಲಿಗೆ ವರ್ಗಾಯಿಸುವಂತೆ ಸ್ಥಳೀಯ ಪೊಲೀಸರಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.