ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆ ನಡೆಯಿತು.
2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ರೂ. 19432.22 ಕೋಟಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ರೂ. 8267.30 ಕೋಟಿಗಳು ಸೇರಿ ಒಟ್ಟಾರೆಯಾಗಿ ರೂ. 27,699.52 ಕೋಟಿ ಅನುದಾನ ಒದಗಿಸಲಾಗಿದೆ. ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು. ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜನರಿಗೆ
ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ 25 ರಿಂದ 30 ಸಾವಿರ ಜನ ವಾಪಸ್ ಹೋಗಿದ್ದಾರೆ. ಆದ್ದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿಯೊಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಜಾಬ್ ಕಾರ್ಡ್ಗಳನ್ನು ಕಡ್ಡಾಯವಾಗಿ ವಿತರಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ, ಕಾರ್ಮಿಕರಿಗೆ ಪ್ರಸ್ತುತ ಕನಿಷ್ಠ 100 ದಿನಗಳಿರುವ ಕೆಲಸದ ದಿನಗಳನ್ನು 150 ಕೆಲಸದ ದಿನಗಳಿಗೆ ಹೆಚ್ಚಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂ ವಿಶೇಷ ಉಪಯೋಜನೆಗಳಡಿ ನಿಗದಿಪಡಿಸಿದ ಅನುದಾನ ಸದ್ಬಳಕೆಯಾಗಬೇಕು., ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸ್ವಾಭಿಮಾನದಿಂದ ಬದುಕುವ ಎಲ್ಲ ಅವಕಾಶಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೆ ವೇಳೆ ಸಭೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಅಭಿವೃದ್ಧಿ ಪರಿಷತ್ ಉಪಾಧ್ಯಕ್ಷ ಗೋವಿಂದ ಕಾರಜೋಳ, ಕೋವಿಡ್19 ಹಿನ್ನೆಲೆಯಲ್ಲಿ ಮಂಡಿಸಿರುವ ಬಜೆಟ್ಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲ ಕ್ರೋಢೀಕರಣ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇಲೆ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಆರ್ಡಿಪಿಆರ್ ಸಚಿವ ಕೆ, ಎಸ್ ಈಶ್ವರಪ್ಪ, ಕಂದಾಯ ಸಚಿವ ಆರ್ ಅಶೋಕ್, ಸಂಸದ ಉಮೇಶ್ ಜಾಧವ್ ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.








