ಮಣಿಪುರ – ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಸರ್ಕಾರ

ಮಣಿಪುರ, ಜೂನ್ 18: ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಸಿಲುಕಿದ್ದು, ನ್ಯಾಶನಲ್ ಪೀಪಲ್ಸ್ ಪಾರ್ಟಿ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದೆ.
ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮೂವರು ಸಚಿವರು, ತೃಣಮೂಲ ಕಾಂಗ್ರೆಸ್ ನ ಏಕೈಕ ಶಾಸಕ ಮತ್ತು ಜಿರಿಬಾಮ್ ನ ಸ್ವತಂತ್ರ ಶಾಸಕರು ಬಿಜೆಪಿ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.
2017ರಲ್ಲಿ ನಡೆದ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ, ಬಿಜೆಪಿ 60 ವಿಧಾನಸಭಾ ಕ್ಷೇತ್ರಗಳ ಪೈಕಿಯಲ್ಲಿ 21 ಸ್ಥಾನ ಗೆದ್ದು ಮಣಿಪುರದಲ್ಲಿ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ ಎನ್ಪಿಪಿ ಮತ್ತು ಎನ್ಪಿಎಫ್ ಪಕ್ಷಗಳ ತಲಾ ನಾಲ್ಕು, ಎಲ್ಜೆಪಿ, ಟಿಎಂಸಿ ಪಕ್ಷಗಳಿಂದ ತಲಾ ಓರ್ವ ಶಾಸಕರ ಬೆಂಬಲವನ್ನು ಪಡೆದಿತ್ತು.
ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಎನ್.ಪಿ.ಪಿ ಪಕ್ಷ ಬಿಜೆಪಿಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದು, ಟಿಎಂಸಿ ಶಾಸಕರು ಕೂಡ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಇದರ ಜೊತೆ ಬಿಜೆಪಿಯ ಮೂವರು ಶಾಸಕರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದಾಗಿ ಬಿಜೆಪಿಯ ಸಂಖ್ಯಾ ಬಲ 23ಕ್ಕೆ ಕುಸಿದಿದೆ.

ಸರ್ಕಾರ ರಚನೆಗೆ 31 ರ ಸಂಖ್ಯಾಬಲದ ಅಗತ್ಯವಿದ್ದು ಸಿಎಂ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ








