ನವದೆಹಲಿ : ನಾಯಕತ್ವದ ಬದಲಾವಣೆ ವಿಚಾರವಾಗಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಹೊಸ ಅಧ್ಯಕ್ಷ ನೇಮಕ ಪ್ರಕ್ರಿಯೆ ಆರಂಭಿಸಿ ಎಂದು ಸೋನಿಯಾ ಗಾಂಧಿ ಅವರು ಹೇಳಿದ್ದಾರೆ. ಆದ್ರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿ ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಣಿ ಸಭೆ ಆರಂಭವಾಗುತ್ತಿದ್ದಂತೆ ಸೋನಿಯಾ ಗಾಂಧಿ ಅವರು ನಾನು ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿ, ರಾಜೀನಾಮೆ ಬಗ್ಗೆ ಪ್ರಸ್ತಾಪಿದರು. ಹಾಗೇ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಿ ಎಂದು ಮನವಿ ಮಾಡಿಕೊಂಡರು.
ಇವರ ಬಳಿಕ ಮಾತನಾಡಿದ ಮನಮೋಹನ್ ಸಿಂಗ್ ಅವರು, ಸೋನಿಯಾ ಗಾಂಧಿ ಅವರ ಮನವೊಲಿಕೆ ಮುಂದಾದರು. ಸದ್ಯದ ಪರಿಸ್ಥಿಯಲ್ಲಿ ನೀವೇ ಅಧ್ಯಕ್ಷರಾಗಿ ಮುಂದುವರಿಯುವುದು ಸೂಕ್ತ ಎಂದು ತಿಳಿಸಿದರು. ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟೋನಿ ಅವರು ಕೂಡ ಸೋನಿಯಾ ಗಾಂಧಿ ಪರ ಬ್ಯಾಟ್ ಬೀಸಿದರು. ಅಲ್ಲದೆ ನಾಯಕತ್ವ ಬದಲಾವಣೆ ಬಗ್ಗೆ ಪತ್ರ ಬರೆದ ನಾಯಕರ ವಿರುದ್ಧ ಕಿಡಿಕಾರಿದರು.









