ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರ ರಾಜಕೀಯ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಪ್ರತಿಪಕ್ಷಗಳು ಹಾಗೂ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯದಲ್ಲೇ ನಡೆಯಲಿರುವ ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಲಿನ ಭೀತಿಯಲ್ಲಿ ಮರಾಠಿಗರ ಓಟುಗಳನ್ನು ಸೆಳೆಯಲು ಮರಾಠ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದರೆ, ಕನ್ನಡಿಗರ ವಿರುದ್ಧ ªಮರಾಠಿಗರು ಕಿರಿಕ್ ಮಾಡುತ್ತಲೇ ಬಂದಿದ್ದಾರೆ. ಕನ್ನಡ ರಾಜ್ಯೋತ್ಸವ ನಡೆಸಿದರೆ ಮರಾಠಿಗರು ಕರಾಳ ದಿನ ಆಚರಿಸುತ್ತಾರೆ. ಇಂತಹವರ ಓಲೈಕೆಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಇದನ್ನು ತಕ್ಷಣ ರದ್ದು ಮಾಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಕರೆ ನೀಡಿವೆ.
ಈ ನಡುವೆ, ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸುತ್ತಿರುವವರಿಗೆ ವಿಜಯಪುರದ ಮರಾಠ ಸಮಾಜದ ಯುವಕನೊಬ್ಬ ಬಹಿರಂಗ ಪತ್ರ ಬರೆದಿದ್ದಾನೆ.
ಈ ಪತ್ರದ ಸಾರಾಂಶ ಇಲ್ಲಿದೆ..
ಆತ್ಮೀಯರೇ,
ಕರ್ನಾಟಕ ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ಈ ನಾಡಿನಲ್ಲಿ ಶತ ಶತಮಾನಗಳಿಂದ ನೂರಾರು ಜಾತಿಯ ಜನರು ಇಲ್ಲಿ ನೆಲೆ ನಿಂತು ಸಹಬಾಳ್ವೆ ಮಾಡುತ್ತಿದ್ದಾರೆ. ಅದರಂತೆ ಮರಾಠಾ ಸಮುದಾಯದ ಜನರೂ ಕೂಡ ಹತ್ತಾರು ತಲೆಮಾರಿನಿಂದ ಇಲ್ಲಿಯೇ ವಾಸಿಸುತ್ತಿದ್ದು, ಕರ್ನಾಟಕದಲ್ಲಿ ಇದ್ದು ಕನ್ನಡ ಭಾಷಿಕರಾಗಿಯೇ ಮರಾಠಾ ಸಂಸ್ಕೃತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ದೇಶಾದ್ಯಂತ ಉಡುಪಿ ಹೊಟೇಲುಗಳು ಇರೋದು ಕನ್ನಡಿಗರ ಹೆಮ್ಮೆ. ರಾಜಸ್ಥಾನ ಜನರ ಪಾನಿಪುರಿ ತಿನ್ನುತ್ತೇವೆ. ಗುಜರಾತಿ ಮಾರ್ವಾಡಿಗಳ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತೇವೆ. ಹೀಗೆ ದೇಶದ ಆ ಮೂಲೆಯ ಜನರು ಈ ಮೂಲೆಯಲ್ಲಿ, ಈ ಮೂಲೆಯ ಜನರು ಆ ಮೂಲೆಯಲ್ಲಿ ವಾಸವಾಗಿದ್ದಾರೆ. ಹಾಗಾಗಿಯೇ ನಾವು ಭಾರತೀಯರು ಎನಿಸಿಕೊಂಡಿದ್ದೇವೆ. ಭಾರತ ಮಾತೆಯ ಪುತ್ರರಾಗಿದ್ದೇವೆ. ಹಾಗೇನೆ ಛತ್ರಪತಿ ಶಿವಾಜಿ ಮಹಾರಾಜರ ಕಾಲದಿಂದಲೂ ಕೂಡ ಮರಾಠ ಜಾತಿಯ ಜನರು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆ ನಿಂತು ಕನ್ನಡಿಗರೇ ಆಗಿದ್ದಾರೆ. ಜಾತಿಯಿಂದ ಮರಾಠ ಆಗಿದ್ದರೂ ಆಡೋ ಭಾಷೆ ಮಾತ್ರ ಅಪ್ಪಟ ಹಾಲು-ಜೇನಿನ ಭಾಷೆಯಾಗಿರೋ ಕನ್ನಡವನ್ನೇ ಅನ್ನೋದು ಬಹುತೇಕರಿಗೂ ಗೊತ್ತು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 7 ದಶಕಗಳೇ ಕಳೆದವು. ಕರ್ನಾಟಕ ಏಕೀಕರಣ ಆಗಿ, ಆರೂವರೆ ದಶಕಗಳು ಸಂದಿವೆ. ಹೀಗಿರಬೇಕಾದರೆ ಕರ್ನಾಟಕ ರಾಜ್ಯದಲ್ಲಿ ನೆಲೆ ನಿಂತರುವ 50 ಲಕ್ಷಕ್ಕೂ ಹೆಚ್ಚು ಮರಾಠಾ ಜಾತಿಯ ಜನರನ್ನು ಇದೀಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿಲನ್ ಮಾಡಿ ನಿಲ್ಲಿಸುತ್ತಿದ್ದಾರೆ.
ಈಗಾಗಲೇ ಶೋಷಣೆಗೊಳಗಾದ ಕೆಲವು ಜಾತಿ, ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ ಮಂಡಳಿ, ಪ್ರಾಧಿಕಾರ ಮುಂತಾದ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಮೇಲ್ಮಟ್ಟಕ್ಕೆ ತರುವ ಪ್ರಯತ್ನಗಳು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಸಿದ್ಧರಾಮಯ್ಯ ಸೇರಿದಂತೆ ಹಲವರು ಮಾಡಿದ್ದು, ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಏಳ್ಗೆಗಾಗಿ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಅದೇ ತೆರನಾಗಿ ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿ, 50 ಕೋಟಿ ಹಣ ಮೀಸಲಿಟ್ಟಿರೋದಾಗಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ (ನವೆಂಬರ್ 13) ಘೋಷಣೆ ಮಾಡಿದ್ದರು.
ಆದ್ರೆ ಮರಾಠಾ ಜಾತಿ ಹಾಗೂ ಮರಾಠಿ ಭಾಷಿಕರ ನಡುವಿನ ವ್ಯತ್ಯಾಸ ತಿಳಿಯದ ಕೆಲವು ಜನರು ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿದರು. ಇದು ಮರಾಠಿ ಭಾಷಿಕರ ಪರವಾಗಿರೋ ಪ್ರಾಧಿಕಾರ ಎಂದು ಹುಯಿಲೆಬ್ಬಿಸಿದರು. ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಕನ್ನಡದ ಕಟ್ಟಾಳು ಎಂದೇ ಹೆಸರಾದ ವಾಟಾಳ್ ನಾಗರಾಜ್ ಮುಂತಾದವರು ಪ್ರಾಧಿಕಾರ ರಚನೆಯನ್ನು ಬಲವಾಗಿ ವಿರೋಧಿಸಿದರು. ಅಷ್ಟೇ ಅಲ್ಲದೇ ಕೆಲವೊಂದು ಮಾಧ್ಯಮಗಳು ಪ್ರಾಧಿಕಾರದ ರಚನೆಯ ಕುರಿತು ಕಪೆÇೀಲ ಕಲ್ಪಿತ ವರದಿಗಳನ್ನು (ಬಿತ್ತರಿಸಿದರು, ಪ್ರಕಟಿಸಿದರು) ಮಾಡಿ ಜನರ ದಿಕ್ಕು ಬದಲಾಯಿಸಲು ಕಾರಣರಾದರು.
ಮರಾಠಾ ಭಾಷಿಕರೇ ಬೇರೆ, ಮರಾಠಾ ಜಾತಿಯೇ ಬೇರೆ ಎಂಬುವುದನ್ನು ಮರೆಮಾಚಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ, ಇದು ಮರಾಠಿ ಭಾಷಿಕರದ್ದು, ಇದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಡೆತ ಬೀಳುತ್ತೆ ಅಂತೆಲ್ಲ ಬೊಬ್ಬೆ ಹಾಕಿದರು. ಆದ್ರೆ ಕೊಂಕಣಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದಾಗ ಇವರೆಲ್ಲ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಬೆರಳೆಣಿಕೆಯಷ್ಟು ಇರೋ ಎಂಇಎಸ್ ಪುಂಡರೊಂದಿಗೆ ಮರಾಠಾ ಜಾತಿಯ ಜನರನ್ನು ಥಳಕು ಹಾಕೋ ಪ್ರಯತ್ನ ಮಾಡಿದರೂ ಕೂಡ ಮರಾಠಾ ಸಮುದಾಯ ಇದಕ್ಕೆ ತಕ್ಕ ಪ್ರತ್ಯತ್ತರ ನೀಡಿತು. ಮರಾಠಾ ಅಭಿವೃದ್ಧಿ ಪ್ರಾಧಿಕಾರ ಅನ್ನೋ ಹೆಸರನ್ನು ಮರಾಠಾ ಅಭಿವೃದ್ಧಿ ನಿಗಮ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬದಲಾವಣೆ ಮಾಡಿದರು.
ಬ್ರಾಹ್ಮಣ ಸಮುದಾಯದ ಜನರಿಗಾಗಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ, ಗೊಲ್ಲ ಜನಾಂಗದ ಅಭಿವೃದ್ಧಿಗಾಗಿ ಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಇರೋ ಹಾಗೇ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕೂಡ ಜಾರಿಯಲ್ಲಿ ಬಂದಿದ್ದರೂ ಕೂಡ, ಮರಾಠಾ ಭಾಷಿಕರಿಗೆ ಮರಾಠಾ ಸಮುದಾಯದ ಜನರನ್ನು ಥಳಕು ಹಾಕಲಾಯಿತು. ಹಾಗೇ ನೋಡಿದಲ್ಲಿ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರ-ಕರ್ನಾಟಕ ರಾಜ್ಯದ ಗಡಿ ಭಾಗದ ಜಿಲ್ಲೆಯ ಜನರು ( ದಲಿತರು, ಲಿಂಗಾಯತರು, ಜೈನರು, ಮರಾಠರು, ಗಾಣಿಗರು, ಕುರುಬರು ಸೇರಿದಂತೆ ಬಹುತೇಕ ಸಮುದಾಯದ ಜನರು) ಸಹಜವಾಗಿಯೇ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. ಬರೆಯುತ್ತಾರೆ. ಓದುತ್ತಾರೆ.
ಆದ್ರೆ ಬೆಳಗಾವಿ, ಬೀದರ್, ಕಾರವಾರ ಹೊರುಪಡಿಸಿದಂತೆ ಇನ್ನುಳಿದ ಗಡಿ ಭಾಗದ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮರಾಠಾ ಸಮುದಾಯದ ಜನರಿಗೆ ಮರಾಠಿ ಭಾಷಿಯೇ ಗೊತ್ತಿಲ್ಲ. ಅವರೆಲ್ಲರ ಉಸಿರು ಕನ್ನಡ..ಕನ್ನಡ…ಕನ್ನಡ..
ಇನ್ನು ಕೆಲವರು ಬಸವ ಕಲ್ಯಾಣ ವಿಧಾನಸಭಾ ಉಪ ಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮರಾಠಿ ಭಾಷಿಕರನ್ನು, ಮರಾಠಾ ಸಮುದಾಯವನ್ನು ಒಲಿಸಿಕೊಳ್ಳಲು, ಮತ ಬ್ಯಾಂಕ್ ಸೃಷ್ಟಿಸಲು ಚುನಾವಣಾ ಪೂರ್ವದಲ್ಲಿ ಮಾಡಿದ್ದಾರೆ ಎಂದು ಬೊಬ್ಬೆ ಹಾಕಿದರು. ಯಾವುದೇ ಸರ್ಕಾರ ಇರಲಿ, ಚುನಾವಣೆ ದೃಷ್ಟಿಯಿಂದ ಹಲವಾರು ಘೋಷಣೆಗಳನ್ನು ಮಾಡೋ ಪರಿಪಾಠ ಇಂದು ನಿನ್ನೆಯದಲ್ಲ. ಸರ್ಕಾರ 5 ವರ್ಷಗಳ ಅವಧಿ ಪೂರೈಸಿದಾಗ ಕೊನೆಯ ಬಜೆಟ್ ವನ್ನು ಬಹುತೇಕರು ಚುನಾವಣಾ ದೃಷ್ಟಿಯಿಂದಲೇ ಮಾಡುತ್ತಾರೆ. ಅಲ್ಲದೇ ಆ ಸಂದರ್ಭದಲ್ಲಿ ಜನರ ನಿರೀಕ್ಷೆ ಕೂಡ ಅದೇ ಆಗಿರುತ್ತದೆ.
ಹೀಗಿರುವಾಗ ಉಪ ಚುನಾವಣೆ ನಡೆಯುವ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಆಳುವ ಪಕ್ಷ ಸಹಜವಾಗಿಯೇ ಮಾಡುತ್ತ ಬಂದಿರುವುದು ಇತಿಹಾಸ. ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ ಬಳಿಕ ಸರ್ಕಾರ ಹೊಸ ಯೋಜನೆ, ಘೋಷಣೆ, ಹಣ ಬಿಡುಗಡೆ ಮುಂತಾದವುಗಳನ್ನು ಮಾಡಿದರೆ ಅದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ. ಆದ್ರೆ ಚುನಾವಣೆ ಪೂರ್ವದಲ್ಲಿ ಇಂತಹ ಘೋಷಣೆ ಮಾಡೋದು ಸಂವಿಧಾನ ಬಾಹಿರ ಅಲ್ಲವೇ ಅಲ್ಲ ಎಂಬುವದನ್ನು ಮರಾಠಾ ಅಭಿವೃದ್ಧಿ ನಿಗಮ ರಚನೆಯ ಆದೇಶ ವಿರೋಧಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇಷ್ಟೆಲ್ಲ ಆದ ಮೇಲೂ ಕೂಡ ಹಠಕ್ಕೆ ಬಿದ್ದವರಂತೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರು ಡಿಸೆಂಬರ್ 5 ರಂದು ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿದ್ದನ್ನು ವಿರೋಧಿಸಿ ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಅಲ್ಲ ಸ್ವಾಮೀ, ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿದ್ದನ್ನು ವಿರೋಧಿಸುವ ತಾವು ಈ ಹಿಂದೆ ಆಯಾ ಜಾತಿಯ ಜನರ ಅನುಕೂಲಕ್ಕಾಗಿ ರಚನೆಯಾಗಿರುವ ಪ್ರಾಧಿಕಾರ, ನಿಗಮಗಳನ್ನು ಏಕೆ ವಿರೋಧಿಸಲಿಲ್ಲ? ಇದೀಗ ರಚನೆಯಾಗಿರುವ ಬೇರೆ ಬೇರೆ ಜಾತಿಯ ಪ್ರಾಧಿಕಾರ, ನಿಗಮಳಿಗೆ ಇಲ್ಲದ ವಿರೋಧ ಮರಾಠಾ ಅಭಿವೃದ್ಧಿ ನಿಗಮ ಕ್ಕೆ ಮಾತ್ರ ಏಕೆ? ನಾವು ಕನ್ನಡಿಗರಲ್ಲವೋ? ನಾವು ಕರ್ನಾಟಕದವರು ಅಲ್ಲವೋ?
ನಾವು ಕನ್ನಡ ನಾಡಿನ ನಾಗರಿಕರಲ್ಲವೊ? ನಾವು ಕರ್ನಾಟಕ ರಾಜ್ಯವನ್ನು ಬಿಟ್ಟು ಎಲ್ಲಿಗೆ ಹೋಗಬೇಕು? ಶತ ಶತಮಾನಗಳಿಂದ ಇಲ್ಲಿಯೇ ನೆಲೆಸಿರುವ ನಮ್ಮ ನೆಲೆಯಾದರೂ ಯಾವುದು? ಮರಾಠಾ ಜಾತಿ ಹಾಗೂ ಮರಾಠಿ ಭಾಷೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲದ ತಾವೆಂತಹ ಕನ್ನಡ ಹೋರಾಟಗಾರರು? ಕರವೇ ಸೇರಿದಂತೆ ಬೇರೆ ಬೇರೆ ಕನ್ನಡ ಸಂಘಟನೆಗಳಲ್ಲಿ ಇದ್ದುಕೊಂಡು ಕನ್ನಡ ನಾಡು ನುಡಿಯ ಉಳಿವಿಗಾಗಿ ಹೋರಾಟ ಮಾಡಿ ರಾಜ್ಯಾದ್ಯಂತ ಸಾವಿರಾರು ಪ್ರಕರಣಗಳನ್ನು ದಾಖಲಿಸಿಕೊಂಡು ಪ್ರತಿ ನಿತ್ಯ ಕೋರ್ಟಿಗೆ ಅಲೆದಾಡುತ್ತಿರುವ ಮರಾಠಾ ಸಮುದಾಯಕ್ಕೆ ಸೇರಿದ ಕನ್ನಡಾಭಿಮಾನಿಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಸರಜೂ ಕಾಟ್ಕರ್ ರಂತಹ ಸಾಹಿತಿಗಳು, ಡಾ. ರಾಮಕೃಷ್ಣ ಮರಾಠೆ ಅವರಂತಹ ಉಪನ್ಯಾಸಕರು, ಬ್ಯಾಂಕ್ ಜನಾರ್ದನ್ ಅವರಂತಹ ನಟರು ತಮಗೆ ಕಾಣಿಸುತ್ತಿಲ್ಲವೇ? ಕರ್ನಾಟಕ ಬಂದ್ ಕರೆ ಯಾವ ಪುರುಷಾರ್ಥಕ್ಕೆ ಸ್ವಾಮೀ.. ತಮ್ಮ ಹೋರಾಟದ ಹಿಂದಿನ ಅಸಲಿ ಸತ್ಯ ಏನೆಂಬುದನ್ನು ಬಹಿರಂಗ ಪಡಿಸಿ.
ಚಂದ್ರಶೇಖರ ಚಿನಕೇಕರ
ಮರಾಠಾ ಯುವ ನಾಯಕ
ವಿಜಯಪುರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel