IPL 2022 : ಐಪಿಎಲ್ ಟೂರ್ನಿಯಿಂದ ಹೊರಗುಳಿದ ಮಾರ್ಕ್ ವುಡ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಬೌಲರ್ ಆಗಿರುವ ಇಂಗ್ಲೆಂಡ್ ಆಟಗಾರ ಮಾರ್ಕ್ ವುಡ್ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಐಪಿಎಲ್ ಆರಂಭದ ಬೆನ್ನಲ್ಲೇ ಎಲ್ಲಾ ತಂಡಗಳ ಆಟಗಾರರು ತಮ್ಮ ಫ್ರಾಂಚೈಸಿ ಕೂಡಿಕೊಳ್ಳುವ ಮೂಲಕ ಅಭ್ಯಾಸ ಆರಂಭಿಸಿದ್ದಾರೆ.
ಈ ನಡುವೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗಾಯಗೊಂಡು ಸರಣಿಯಿಂದ ಹೊರಗುಳಿದಿರುವ ಮಾರ್ಕ್ ವುಡ್, ಗಾಯದ ಸಮಸ್ಯೆಯಿಂದಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಲಭ್ಯರಾಗಿದ್ದಾರೆ ಎನ್ನಲಾಗಿದೆ.
ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಆಗಿರುವ ಮಾರ್ಕ್ ವುಡ್, ಫೆಬ್ರವರಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 7.5 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದರು.
ಆದರೆ ಇತ್ತೀಚಿಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 17 ಓವರ್ ಬೌಲಿಂಗ್ ಮಾಡಿ, ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರ ನಡೆದಿದ್ದರು. ಹೀಗಾಗಿ ಮಾರ್ಕ್ ವುಡ್ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಮಾರ್ಕ್ ವುಡ್ ಅನುಪಸ್ಥಿತಿ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.
ಹೀಗಾಗಿ ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಜೇಸನ್ ಹೋಲ್ಡರ್, ಆಸ್ಟ್ರೇಲಿಯಾದ ಮಾರ್ಕಸ್ ಸ್ಟಾಯ್ನಿಸ್, ಶ್ರೀಲಂಕಾದ ಧುಶ್ಮಂತ ಚಮೀರಾ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಬೇಕಿದೆ.
mark-wood-pulls-out-tourney-injury









