ಚಿಕ್ಕೋಡಿ : ಕೊರೊನಾ ಹಿನ್ನೆಲೆ ಮದುವೆ ಸಮಾರಂಭಗಳಿಗೆ ಹೆಚ್ಚು ಜನರನ್ನು ಸೇರಿಸೋದಕ್ಕೆ ಸರ್ಕಾರ ನಿಷೇಧ ಹೇರಿದ್ದರೂ, ಕೆಲ ಪ್ರಭಾವಿಗಳು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿನ ಸಾಕಷ್ಟು ಮಂದಿ ಅದ್ಧೂರಿ ಮದುವೆಗಳನ್ನು ಮಾಡುತ್ತಿದ್ದಾರೆ. ಈಗ ಅದೇ ರೀತಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅದ್ಧೂರಿ ಮದುವೆ ಮಾಡಿದ್ದ ಬಿಜೆಪಿ ಮುಖಂಡನಿಗೆ ಹುಕ್ಕೇರಿ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಬಿಜೆಪಿ ಮುಖಂಡ ದಯಾನಂದ ವಂಟಮುರಿ ಅವರು ತಮ್ಮ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಈ ಹಿನ್ನೆಲೆ ಹುಕ್ಕೇರಿ ಪೊಲೀಸರು ದಯಾನಂದ ವಂಟಮುರಿ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ.
ಸೋಮವಾರ ಮಗನ ಮದುವೆ ಮಾಡಿದ್ದ ದಯಾನಂದ ವಂಟಮುರಿ, ಮಹಾರಾಷ್ಟ್ರದಿಂದ ಸಾಕಷ್ಟು ಜನರನ್ನು ಮದುವೆಗೆ ಕರೆಯಿಸಿದ್ದರು. ಮದುವೆ ಜೊತೆ ಸಂಜೆ ಗ್ರಾಮದಲ್ಲಿ ವಧು-ವರನ ಅದ್ಧೂರಿ ಮೆರವಣಿಗೆ ಮಾಡಿದ್ದರು. ಈ ವೇಳೆ 500ಕ್ಕೂ ಹೆಚ್ಚು ಜನರನ್ನು ಮದುವೆಯಲ್ಲಿ ಸೇರಿದ್ದು, ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊವಿಡ್-19 ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 188, 269, 270, ಎಪಿಡೆಮಿಕ್ ಡಿಸೀಸ್ ಕಾಯ್ದೆ, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಅಡಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








