ಕೊಚ್ಚಿ: ದೇಶಾದ್ಯಂತ ಕೊರೊನಾ ಆವಳಿ ಹೆಚ್ಚಾಗುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಭಾರತಕ್ಕೆ ಕೊರೊನಾ ಎಂಟ್ರಿ ಕೊಟ್ಟಾಗಿನಿಂದಲೂ ಮುನ್ನೆಚ್ಚರಿಕಾ ಕ್ರಮವಾಗಿ ಜನರು ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳ ಮೊರೆ ಹೋಗುತ್ತಿದ್ದಾರೆ. ಪೂರೈಕೆಗಿಂತ ಬೇಡಿಕೆ ಹೆಚ್ಚಾದ ಕಾರಣ ಮೆಡಿಕಲ್ ಶಾಪ್ ಗಳು ಅವುಗಳ ಬೆಲೆಯನ್ನು ಹೆಚ್ಚಿಸಿ ಮಾರಾಟ ಮಾಡಲಾರಂಭಿಸಿವೆ. ಆದರೆ ಕೇರಳದಲ್ಲಿರುವ ಮೆಡಿಕಲ್ ಶಾಪ್ ನಲ್ಲಿ ಕೇವಲ 2 ರೂಪಾಯಿಗೆ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದು, ಜನರ ಮೆಚ್ಚುಗೆಗೆ ಈ ಶಾಪ್ ಪಾತ್ರವಾಗಿದೆ.
ಮಾನವೀಯತೆ ಮುಖ್ಯ ಎಂದ ಮಾಲೀಕ
ಹೌದು…! ಕೇರಳದ ಕೊಚ್ಚಿಯಲ್ಲಿರುವ ಮೆಡಿಕಲ್ ಶಾಪ್ ಒಂದರಲ್ಲಿ ಮಾಸ್ಕ್ ಗಳನ್ನು ಕೇವಲ 2 ರೂಪಾಯಿಗೆ ಮಾರಲಾಗುತ್ತಿದೆ. ಕಳೆದ ಎಂಟು ವರ್ಷಗಳಿಂದ ಈ ಶಾಪ್ ನಲ್ಲಿ ಮಾಸ್ಕ್ ಗಳನ್ನು ಕೇವಲ 2 ರೂಪಾಯಿಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಕರೊನಾ ಹಿನ್ನೆಲೆ ಅದರ ಬೆಲೆಯನ್ನು ಏರಿಕೆ ಮಾಡದೆ ಅದೇ ಬೆಲೆಗೆ ನೀಡುತ್ತಿದ್ದೇವೆ ಎನ್ನುತ್ತಾರೆ ಅಂಗಡಿಯ ಮಾಲೀಕರು.
ಅಂದ್ಹಾಗೆ ಇವರಿಗೆ ಮಾಸ್ಕ್ ಕೊಳ್ಳಲು ಒಂದು ಮಾಸ್ಕ್ ಗೆ 8ರಿಂದ 10 ರೂಪಾಯಿ ಖರ್ಚು ಬೀಳುತ್ತದೆಯಂತೆ. ಈ ವಿಚಾರದಲ್ಲಿ ಲಾಭಕ್ಕಿಂತ ಮಾನವೀಯತೆ ದೊಡ್ಡದು ಎನ್ನುವ ಕಾರಣದಿಂದ ಬೆಲೆ ಕಡಿಮೆ ಮಾಡಿ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದೇವೆ. ಬೇರೆ ಶಾಪ್ ಗಳಲ್ಲಿ ಇದೇ ಮಾಸ್ಕ್ ನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್ ಗಳು ಮತ್ತು ಇತರೆ ಸಿಬ್ಬಂದಿಗೆ ಮಾಸ್ಕ್ ನ ಅಗತ್ಯತೆ ಜಾಸ್ತಿ ಇದ್ದು ಅಂತವರಿಗೆ ಸಂತೋಷದಿಂದ ಮಾಸ್ಕ್ ನೀಡುತ್ತೇವೆ ಎಂದು ಮೆಡಿಕಲ್ ಶಾಪ್ ನ ಮಾಲೀಕರು ತಿಳಿಸಿದ್ದಾರೆ. ಇನ್ನು ಇಲ್ಲಿಯವರೆಗೂ 5000ಕ್ಕೂ ಹೆಚ್ಚು ಜನರು ಈ ಮೆಡಿಕಲ್ ಶಾಪ್ ನಲ್ಲಿ ಮಾಸ್ಕ್ ಖರೀದಿ ಮಾಡಿದ್ದಾರಂತೆ.