ಮೈಸೂರು: ಅಪಘಾತದಲ್ಲಿ (Accident) ಗಾಯಗೊಂಡಿರುವ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್ (Rohith) ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವರದಿಯಾಗಿದೆ.
ರೋಹಿತ್ ಗೆ ದವಡೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಅಳವಡಿಸಲಾಗಿದೆ ಎನ್ನಲಾಗಿದೆ. ದವಡೆಗೆ ಗಂಭೀರವಾಗಿ ಗಾಯವಾಗಿದ್ದರಿಂದಾಗಿ 8 ತಿಂಗಳು ದ್ರವ ಆಹಾರ ಸೇವಿಸುವಂತೆ ವೈದ್ಯರು ಹೇಳಿದ್ದಾರೆ.
ರೋಹಿತ್ ತಾಯಿ ಛಾಯಾಲಕ್ಷ್ಮಿ ಅವರಿಗೆ ಗಂಭೀರ ಗಾಯವಾಗಿದೆ. ಇಂದು ಛಾಯಾಲಕ್ಷ್ಮಿಯನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡುತ್ತೇವೆ ಎಂದಿದ್ದಾರೆ ಎಂದು ರೋಹಿತ್ ಸ್ನೇಹಿತನ ತಾಯಿ ಹೇಳಿದ್ದಾರೆ.
ಹೊಸಹಳ್ಳಿ ಸಮೀಪದ ಆರಾಧನಾ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜನೆಗೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರೋಹಿತ್, ತಾಯಿ ಮತ್ತು ಸ್ನೇಹಿತರನ್ನು ಕಾಲೇಜು ಮುಖ್ಯಸ್ಥ ಯೋಗಣ್ಣ ಅವರ ಕಾರಿನಲ್ಲಿ ಪಾಂಡವಪುರದಿಂದ ಕರೆತರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
ತಾಯಿ ಛಾಯಾಲಕ್ಷ್ಮಿ ಅವರ ಒಂದು ಕೈ ಮತ್ತು ಒಂದು ಕಾಲು ಮುರಿದಿದೆ. ಕಾರಿನಲ್ಲಿದ್ದ ಸ್ನೇಹಿತ ಯಶಸ್, ಆರಾಧನಾ ಕಾಲೇಜಿನ ಉಪನ್ಯಾಸಕ ಕೇಶವ್ ಮತ್ತು ಶ್ರೀಕಾಂತ್ ಗಾಯಗೊಂಡಿದ್ದಾರೆ. ಶ್ರೀಕಾಂತ್ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.