ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕರನ್ನೇ ಥಳಿಸಿದ ವಿದ್ಯಾರ್ಥಿಗಳು..
ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕರನ್ನೇ ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಜಾರ್ಖಂಡ್ ರಾಜ್ಯದಲ್ಲಿ ನಡೆದಿದೆ.
ಜಾರ್ಖಂಡ್ನ ದುಮ್ಕಾದ ಹಳ್ಳಿಯೊಂದರ ಶಾಲಾ ವಿದ್ಯಾರ್ಥಿಗಳು ತಮಗೆ ಶಿಕ್ಷಕರು ಕಡಿಮೆ ಅಂಕಗಳನ್ನು ನೀಡಿದ್ದಾರೆ ಎಂದು ಶಿಕ್ಷಕರನ್ನ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಗುರುಗಳು ಗಾಯಗೊಂಡ ಬಳಿಕ ಅವರನ್ನು ಬಂಧನದಿಂದ ಮುಕ್ತ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಶಿಕ್ಷಣಾಧಿಕಾರಿ “ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಂಕಗಳನ್ನು ಕಡಿಮೆ ನೀಡಿದ ಕಾರಣಕ್ಕಾಗಿ ಶಿಕ್ಷಕರನ್ನು ಥಳಿಸಲಾಗಿದೆ. ಈ ಬಗ್ಗೆ ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ” ಎಂದು ತಿಳಿಸಿದರು. ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಲಿಖಿತ ದೂರನ್ನು ನೀಡದ ಕಾರಣ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
“ವಿದ್ಯಾರ್ಥಿಗಳು ಸಭೆ ನಡೆಸುವ ನೆಪದಲ್ಲಿ ನಮ್ಮನ್ನ ಕರೆ ಮಾಡಿದರು. ಬಳಿಕ ಜಮಾಯಿಸಿದ್ದ ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ನಪಾಸಾಗಿದ್ದೇವೆ. ಪ್ರಾಯೋಗಿಕ ಅಂಕಗಳನ್ನು ಕಡಿಮೆ ನೀಡಿದ್ದೇ ಇದಕ್ಕೆ ಕಾರಣ ಎಂದು ದೂರಿದರು. ಈ ಅಂಕಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು ನೀಡಬೇಕಿತ್ತು. ಅವರು ಮಾರ್ಕ್ಸ್ ಅನ್ನು ಕೊಡದ ಕಾರಣ ಈ ರೀತಿ ಆಗಿದೆ. ಆದರೆ, ವಿದ್ಯಾರ್ಥಿಗಳು ನಮ್ಮನ್ನು ಥಳಿಸಿದರು ಎಂದು ಹಲ್ಲೆಗೊಳಗಾದ ಶಿಕ್ಷಕ ಕುಮಾರ್ ಸುಮನ್ ತಮ್ಮ ನೋವನ್ನು ತೋಡಿಕೊಂಡರು.








