ವಿರಾಟ್ & ಟೀಮ್ ಜೊತೆ ಸ್ಲೆಡ್ಜಿಂಗ್ ಮಾಡಲ್ಲ…ಬಾಯಿ ಮುಚ್ಕೊಂಡು ಸುಮ್ಮನಿರೋದೇ ಒಳ್ಳೆಯದ್ದು…!
ಮುಂಬರುವ ಡಿಸೆಂಬರ್ ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಸದ್ಯದ ವೇಳಾಪಟ್ಟಿಯ ಪ್ರಕಾರ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ಈಗಾಗಲೇ ಆಸ್ಟ್ರೇಲಿಯಾ ತಂಡ ಮಾನಸಿಕವಾಗಿ ಪೂರ್ವ ತಯಾರಿ ಮಾಡಿಕೊಂಡಿದೆ.
ಸಾಮಾನ್ಯವಾಗಿ ಆಸ್ಟ್ರೇಲಿಯಾ ಪ್ರವಾಸ ಅಂದ್ರೆ ಪ್ರತಿಯೊಂದು ತಂಡಗಳಿಗೂ ಕಠಿಣ ಸವಾಲು. ಅಲ್ಲಿ ಆಟಕ್ಕಿಂತ ಹೆಚ್ಚಾಗಿ ಮಾತಿನ ಸಮರ ನಡೆಯುತ್ತೆ. ಆಸ್ಟ್ರೇಲಿಯನ್ನರು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಪುಣರು ಎಂಬುದು ಗೊತ್ತಿಲ್ಲದ ಸಂಗತಿ ಏನು ಅಲ್ಲ.
ಆದ್ರೆ ಈ ಒಂದು ಹೇಳಿಕೆಯನ್ನು ಗಮನಿಸಿದಾಗ ಆಸ್ಟ್ರೇಲಿಯನ್ನರ ಗೇಮ್ ಪ್ಲಾನ್ ಬದಲಾಗಿದೆಯಾ ಅನ್ನೋ ಒಪ್ರಶ್ನೆ ಮೂಡುತ್ತೆ. ಹೌದು, ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಮ್ಯಾಥ್ಯೂ ವಾಡೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅದು ಏನು ಅಂದ್ರೆ, ಮುಂಬರುವ ಭಾರತ – ಆಸ್ಟ್ರೇಲಿಯಾ ಸರಣಿಯಲ್ಲಿ ಮ್ಯಾಥ್ಯೂ ವಾಡೆ ಅವರು ಸೈಲೆಂಟ್ ಆಗಿರುತ್ತಾರಂತೆ. ವಿರಾಟ್ ಕೊಹ್ಲಿಯ ಪಡೆಯನ್ನು ಕೆಣಕಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಮ್ಯಾಥ್ಯೂ ವಾಡೆ ಅವರು ವಿಕೆಟ್ ಹಿಂದುಗಡೆ ನಿಂತುಕೊಂಡು ಬ್ಯಾಟ್ಸ್‍ಮೆನ್‍ಗಳಿಗೆ ಟಾಂಗ್ ಕೊಡ್ತಾನೆ ಇರುತ್ತಾರೆ. ಅದರಲ್ಲೂ
2017ರ ಭಾರತದ ಏಕದಿನ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಾತಿನ ಚಕಮಕಿ ನಡೆಸಿ ಎದುರಾಳಿ ತಂಡಗಳ ಆಟಗಾರರ ತಾಳ್ಮೆಯನ್ನು ಪರೀಕ್ಷೆ ಮಾಡಿದ್ದರು. ಹೀಗಾಗಿ ಅವರು ಬುದ್ದಿ ಕೂಡ ಕಲಿತಿದ್ದಾರೆ.
ಟೀಮ್ ಇಂಡಿಯಾ ಬಲಿಷ್ಠ ತಂಡ. ಅವರ ವಿರುದ್ಧ ಸ್ಲೆಡ್ಜಿಂಗ್ ಮಾಡಿದ್ರೆ ಅವರು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಅದ್ರಲ್ಲೂ ವಿರಾಟ್ ಕೊಹ್ಲಿ ಬುದ್ಧಿವಂತ. ಮಾತಿಗೆ ಮಾತು ಹಾಗೂ ಆಕ್ರಮಣಕಾರಿ ಪ್ರವೃತ್ತಿ ತೋರಿಸುತ್ತಾರೆ. ಹೀಗಾಗಿ ನಾನು ಹೆಚ್ಚಾಗಿ ಅವರ ತಂಟೆಗೆ ಹೋಗಲ್ಲ ಎಂದು ಮ್ಯಾಥ್ಯೂ ವಾಡೆ ಹೇಳಿದ್ದಾರೆ.
ಅದೇ ರೀತಿ ನಾನು ಭಾರತದ ವಿರುದ್ಧ ಕೆಲವು ಪಂದ್ಯಗಳನ್ನು ಆಡಿದ್ದೇನೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಆಡಿಲ್ಲ. ಎರಡು ಬಾರಿ ಭಾರತದಲ್ಲೇ ಆಡಿದ್ದೇನೆ. ಟೀಮ್
ಇಂಡಿಯಾ ಆಕ್ರಮಣಕಾರಿ ಆಡುವ ತಂಡ. ಫೀಲ್ಡಿಂಗ್ ನಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ಮೈದಾನದಲ್ಲಿ ಅದ್ಭುತ ಹೋರಾಟ ನೀಡುವಂತಹ ಸಾಮಥ್ರ್ಯ ಹೊಂದಿರುವ ತಂಡವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಕೂಡ ಅದ್ಭುತವಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾದ ವೇಗಿಗಳೇ ಪ್ರಮುಖ ಅಸ್ತ್ರವಾಗಲಿದೆ. ಹೀಗಾಗಿ ಎರಡು ತಂಡಗಳಿಗೂ ಸಾಕಷ್ಟು ಸವಾಲುಗಳಿವೆ ಎಂದು ಮ್ಯಾಥ್ಯೂ ವಾಡೆ ಅಭಿಪ್ರಾಯಪಟ್ಟಿದ್ದಾರೆ.








