ಇದು ರಿಷಬ್ ಪಂತ್ – ಮ್ಯಾಥ್ಯೂ ವಾಡೆ ನಡುವಿನ ತಮಾಷೆಯ ವಾಕ್ಸಮರ..!
ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್ ನಲ್ಲಿ 29 ರನ್ ಗಳಿಗೆ ಸೀಮಿತವಾದ್ರು. ಹಾಗೇ ವಿಕೆಟ್ ಕೀಪಿಂಗ್ ನಲ್ಲಿ ಸದ್ಯ ಮೂರು ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಅದೇ ರೀತಿ ಕೀಪಿಂಗ್ ನಲ್ಲಿಅತ್ಯುತ್ತಮ ಮಟ್ಟದ ಪ್ರದರ್ಶನ ನೀಡಿಲ್ಲ.
ಆದ್ರೂ ವಿಕೆಟ್ ಹಿಂದುಗಡೆ ನಿಂತುಕೊಂಡು ರಿಷಬ್ ಪಂತ್ ಟೀಮ್ ಇಂಡಿಯಾ ಬೌಲರ್ ಗಳನ್ನು ಹುರಿದುಂಬಿಸುತ್ತಿದ್ದರು. ವಿಕೆಟ್ ಹಿಂದುಗಡೆ ಬೊಬ್ಬೆ ಹೊಡೆಯುತ್ತಾ ಆಸ್ಟ್ರೇಲಿಯಾ ಬ್ಯಾಟ್ಸ್ ಮೆನ್ ಗಳ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ತಂತ್ರ ಕೂಡ ಮಾಡುತ್ತಿದ್ದರು.
ಹಾಗೇ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ರಿಷಬ್ ಪಂತ್ ಮತ್ತು ಮ್ಯಾಥ್ಯೂ ವಾಡೆ ನಡುವೆ ಹಾಗೇ ಸುಮ್ಮನೆ ಒಂದು ತಮಾಷೆಯ ಮಾತುಕತೆ ನಡೆದಿದೆ. ಇದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಕೂಡ ಆಗಿದೆ.
ಅದು ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ನ 25ನೇ ಓವರ್. ಜಸ್ಪ್ರಿತ್ ಬೂಮ್ರಾ ಅವರ ನೇರ ಎಸೆತಕ್ಕೆ ಮ್ಯಾಥ್ಯೂ ವಾಡೆ ಅವರ ಪ್ಯಾಡ್ಗೆ ಬಡಿಯಿತ್ತು. ಆಗ ರಿಷಬ್ ಪಂತ್ ಹೇ ಹೇ ಹೇ ಅಂತ ಹೇಳುತ್ತಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಮ್ಯಾಥ್ಯೂ ವಾಡೆ ಹೇ ಹೇ ಹೇಯ್ ನಿನ್ನನ್ನು ನೀನು ದೊಡ್ಡ ಸ್ಕ್ರೀನ್ ನಲ್ಲಿ ನೋಡುತ್ತಿದ್ದಿಯಾ ಅಂತ ಹೇಳಿದ್ದಾರೆ.
ಈ ವಿಡಿಯೋ ತುಣಕನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಒಟ್ಟಿನಲ್ಲಿ ಆಸ್ಟ್ರೇಲಿಯನ್ನರ ತಂತ್ರಕ್ಕೆ ಪ್ರತಿ ತಂತ್ರವನ್ನು ಈಗ ಟೀಮ್ ಇಂಡಿಯಾ ಆಟಗಾರರು ಮಾಡುತ್ತಿದ್ದಾರೆ. ತಾಳ್ಮೆಯಿಂದ ಹಾಗೂ ಏಕಾಗ್ರತೆಯಿಂದ ಬ್ಯಾಟ್ ಮಾಡುತ್ತಿರುವಾಗ ಬ್ಯಾಟ್ಸ್ ಮೆನ್ ಗಳನ್ನು ತಾಳ್ಮೆ ಪರೀಕ್ಷೆ ನಡೆಸಲು ಎದುರಾಳಿ ಆಟಗಾರರು ಮಾಡುತ್ತಿರುತ್ತಾರೆ. ಇದನ್ನು ಕ್ರಿಕೆಟ್ ನಲ್ಲಿ ಶುರು ಮಾಡಿದ್ದು ಆಸ್ಟ್ರೇಲಿಯನ್ನರೇ. ಇದೀಗ ಅವರಿಗೆ ತಿರುಗೇಟು ನೀಡುವಂತಾಗಿದೆ.
ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲಿ ಸೋಲಿನ ಬಲೆಯೊಳಗೆ ಸಿಲುಕಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 195 ರನ್ ಗಳಿಸಿದ್ರೆ, ಟೀಮ್ ಇಂಡಿಯಾ 326 ರನ್ ಗಳಿಸಿತ್ತು.
131 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಶುರು ಮಾಡಿದ್ದ ಆಸ್ಟ್ರೇಲಿಯಾ ಮೂರನೇ ದಿನದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.