ಬೆಂಗಳೂರು: ನನ್ನ ಅಭಿಮಾನಿಗಳು ಯಾವತ್ತೂ ತಲೆ ತಗ್ಗಿಸುವಂತಹ ಕೆಲಸ ಮಾಡುವುದಿಲ್ಲ ಎಂದು ಅಭಿನಯ ಚಕ್ರವರ್ತಿ ಸುದೀಪ್ (Sudeep) ಹೇಳಿದ್ದಾರೆ.
ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ (Birthday) ಆಚರಿಸಿಕೊಂಡ ಕಿಚ್ಚ, ನಿಮ್ಮ ಪ್ರೀತಿಗಾಗಿ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಹೋದಲ್ಲೆಲ್ಲ ತಲೆ ಎತ್ತಿಕೊಂಡು ನಿಲ್ಲುತ್ತೇವೆ ಅಂದರೆ, ನೀವೇ ಕಾರಣ. ನನ್ನ ಅಭಿಮಾನಿಗಳು ಕಳಂಕ ತರುವಂತಹ ಕೆಲಸ ಮಾಡುವುದಿಲ್ಲ. ಸಿನಿಮಾ ಮಾಡಿದರೆ ಮಾತ್ರ ವ್ಯಕ್ತಿತ್ವದಲ್ಲಿ ದೊಡ್ಡವರಾಗುವುದಿಲ್ಲ ಎಂದು ಹೇಳಿದ್ದಾರೆ.
ಮ್ಯಾಕ್ಸ್ ಚಿತ್ರ ಈ ವರ್ಷ ನಿಮ್ಮ ಮುಂದೆ ಬರಲಿದೆ. ನಾನು ನಿಮ್ಮ ಮೇಲೆ ತುಂಬಾ ಪ್ರೀತಿ ಇಟ್ಟಿದ್ದೇನೆ. ನಾವು ಬೆಳಗ್ಗೆ ಎದ್ದು ಮೇಕಪ್ ಮಾಡಿಕೊಳ್ಳುವುದೇ ನಿಮಗೋಸ್ಕರ. ನಾನು ಈಗಷ್ಟೇ 28 ದಾಟಿ 29ಕ್ಕೆ ಕಾಲಿಡುತ್ತೇನೆ. ನಿಮ್ಮ ಆಶೀರ್ವಾದ ಬೆಂಬಲ ಹೀಗೆ ಇರಲಿ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ಹುಟ್ಟು ಹಬ್ಬಕ್ಕೆ ಬಂದ ಅಭಿಮಾನಿಗಳಿಂದ ರಾತ್ರಿ 12 ಗಂಟೆಗೆ ಬರೋ ಕೂಗು ನಿಮ್ಮಿಂದ ಕೇಳಿದಾಗ ನಮ್ಮ ತಲೆಗೆ ಬರೋದನ್ನೇಲ್ಲ ತೆಗೆದು ತಗ್ಗಿ, ಬಗ್ಗಿ ಇರುವ ರೀತಿ ಮಾಡುತ್ತದೆ. ಐ ಲವ್ ಯು ಆಲ್, ಅಭಿಮಾನಿಗಳು ಮಾಡಿದ ಒಳ್ಳೆ ಕೆಲಸ ಅವರ ತಂದೆ ತಾಯಿಗೆ ಸಲ್ಲುತ್ತೆ. ನಾವು ಬೆಳೆಯುತ್ತಿದ್ದೇವೆ ಅನ್ನೋದು ದೊಡ್ಡದಲ್ಲ. ನನ್ನ ಫ್ಯಾನ್ಸ್ಗಳಲ್ಲಿ ಒಳ್ಳೆಯತನ ಇದೇ ಅದಕ್ಕೆ ನಾವಿಷ್ಟು ಒಳ್ಳೆವ್ರು ಎಂದು ಹೇಳಿದ್ದಾರೆ.