ಎಲ್ಲಾ ಸ್ವರೂಪದಲ್ಲಿಯೂ ಸ್ಥಾನ ಕಳೆದುಕೊಂಡಿರುವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರು ಯೋ-ಯೋ ಟೆಸ್ಟ್‌ನಲ್ಲಿ ಪ್ರಸ್ತುತ ಏಷ್ಯಾ ಕಪ್ ಟೂರ್ನಿಯಲ್ಲಿ ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರನ್ನು ಹಿಂದೆ ಹಾಕಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಯೋ-ಯೋ ಟೆಸ್ಟ್‌ಗೆ ಒಳಗಾಗಿದ್ದರು. ಯೋ-ಯೋ ಟೆಸ್ಟ್ ಮುಗಿಸಿದ ಕನ್ನಡಿಗ ಮಯಾಂಕ್ 21.1 ಅಂಕಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂಕಗಳನ್ನು ಬಲಗೈ ಬ್ಯಾಟ್ಸ್‌ಮನ್ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಯೋ-ಯೋ ಟೆಸ್ಟ್‌ನಲ್ಲಿ ಕೋನ್‌ಗಳ ನಡುವೆ ಓಡುತ್ತಿರುವ ವಿಡಿಯೋವನ್ನು ಹಂಚಿಕೊಂಡ ಮಯಾಂಕ್ ಅಗರ್ವಾಲ್, “ಮುಂದಿನ ಆವೃತ್ತಿಗೆ ಸಜ್ಜಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 21.1 ಅಂಕಗಳನ್ನು ಕೂಡ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಭಾರತ ಏಕದಿನ ತಂಡ ಒಂದು ವಾರ ಬೆಂಗಳೂರಿನಲ್ಲಿ ಲಘು ಶಿಬಿರ ಹಮ್ಮಿಕೊಂಡಿತ್ತು.
ವಿರಾಟ್ ಕೊಹ್ಲಿ ಯೋ-ಯೋ ಟೆಸ್ಟ್‌ನಲ್ಲಿ 17.2 ಅಂಕಗಳನ್ನು ಪಡೆದುಕೊಂಡಿದ್ದರು. ಕೊಹ್ಲಿಯ ಯೋ-ಯೋ ಟೆಸ್ಟ್ ಅಂಕಗಳ ಇನ್‌ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್ ಶಾಟ್‌ಗಳು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.








