ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಮಾಯಾವತಿ ಆಗ್ರಹ
ಲಕ್ನೋ, ಜುಲೈ 19: ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಬಹುಜನ್ ಸಮಾಜ ಪಕ್ಷದ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಶನಿವಾರ ಒತ್ತಾಯಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದು, ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಗೆಹ್ಲೋಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಗೆಹ್ಲೋಟ್ ಅವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ, ಎರಡನೇ ಬಾರಿ ಬಿಎಸ್ಪಿ ಶಾಸಕರಿಗೆ ಮೋಸ ಮಾಡಿರುವುದಾಗಿ ದೂರಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಬಿಎಸ್ಪಿ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ಅನ್ಯಾಯ ಮಾಡಿದ್ದು, ಇದೀಗ ದೂರವಾಣಿ ಕದ್ದಾಲಿಸುವ ಮೂಲಕ ಮತ್ತೊಮ್ಮೆ ಕಾನೂನು ಬಾಹಿರವಾಗಿ ನಡೆದುಕೊಂಡು ಈ ಮೂಲಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.








