ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಂಬೆಗೌಡನಗರ ಬನ್ನೇರಘಟ್ಟ ರಸ್ತೆ, ಮೈಕೋ ಫ್ಯಾಕ್ಟರಿ ಹಿಂಭಾಗ, ಲಕ್ಕಸಂದ್ರಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ದೀಡಿರ್ ಭೇಟಿ ನೀಡಿದರು. ಈ ವೇಳೆ ಅನಧಿಕೃತವಾಗಿ ಒತ್ತುವರಿ ಆಗಿರುವ ಸರ್ಕಾರಿ ಸ್ವತ್ತಿನ ಬಗ್ಗೆ ತಪಾಸಣೆ ನಡೆಸಿದರು.
ಬಿಬಿಎಂಪಿ ಹೊಂಬೆಗೌಡನಗರ ಬನ್ನೇರಘಟ್ಟ ರಸ್ತೆ, ಮೈಕೋ ಫ್ಯಾಕ್ಟರಿ ಹಿಂಭಾಗ, ಲಕ್ಕಸಂದ್ರದಲ್ಲಿ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ಮಾರ್ಬಲ್ ಅಂಗಡಿಗಳನ್ನಿಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರ್ ತಪಾಸಣೆ ನಡೆಸಿ ಸುಮಾರು 10.04 ಎಕರೆ ಪಾಲಿಕೆ ಆಸ್ತಿಯನ್ನು ಕೂಡಲೆ ಸರ್ವೇ ಮಾಡಿ ಪಾಲಿಕೆಯ ಒಡೆತನಕ್ಕೆ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಯರ್ ನಿರ್ದೇಶನ ನೀಡಿದರು.
ಬಳಿಕ ಮಾತನಾಡಿದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಪಾಲಿಕೆಯ ಒಡೆತನಕ್ಕೆ ಒಳಪಟ್ಟ ಆಸ್ತಿಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇಂದಿನಿಂದ ಸ್ಥಳ ತಪಾಸಣೆ ಪ್ರಾರಂಭಿಸಲಾಗಿದೆ. ಒತ್ತುವರಿ ಮಾಡಿರುವ ಪ್ರದೇಶವನ್ನು ಸರ್ವೇ ಮಾಡಿ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ನಾಮಫಲಕ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಭೂದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮಾಪನ ತಂಡ-03 ರವರ ಕಛೇರಿಯಿಂದ ಅಳತೆ ಮಾಡಿ, ಸರ್ವೆ ನಕ್ಷೆಯನ್ನು ತಯಾರಿಸಿರುತ್ತಾರೆ. ಆದರೆ ಸರ್ವೆ ವರದಿಯಲ್ಲಿ ಬ್ಲಾಕ್-03 ಮತ್ತು ಬ್ಲಾಕ್-04 ರಂತೆ ಗುರುತಿಸಲಾಗಿರುವ ಬ್ಲಾಕ್‌ಗಳಲ್ಲಿ ಕೂಡಲೇ ಅಧಿಕೃತವಾಗಿ ಸರ್ವೆ ಮಾಡಿ ಅತಿಕ್ರಮಿತ ಸರ್ಕಾರಿ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು. ಅತಿಕ್ರಮ ಪ್ರದೇಶವನ್ನು ಒತ್ತುವರಿ ವಿಚಾರವಾಗಿ ಅಧಿಕಾರಿಗಳು ಶಾಮೀಲಾಗಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಲು ವಿಶೇಷ ಆಯುಕ್ತರು(ಆಸ್ತಿಗಳು) ರವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.








