Meditation | ಇನ್ಮುಂದೆ ಶಾಲಾ – ಕಾಲೇಜುಗಳಲ್ಲಿ ಪ್ರತಿನಿತ್ಯ 10 ನಿಮಿಷ ಧ್ಯಾನ
ಬೆಂಗಳೂರು : ರಾಜ್ಯದ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿನಿತ್ಯ 10 ನಿಮಿಷ ಧ್ಯಾನ ಶಿಬಿರ ನಡೆಸುವಂತೆ ನಿರ್ದೇಶನ ಮಾಡಲಾಗಿದೆ. ಈ ಕುರಿತು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ.. ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥೀಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿರುತ್ತದೆ.
ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ.
ಈಗಾಗಲೇ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಧ್ಯಾನವನ್ನು ಮಾಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಪ್ರಾಥಮಿಕ ಶಾಳೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಕೋರಿಕೊಂಡಿದ್ದಾರೆ.
ಸಚಿವರ ಟ್ವೀಟ್ ನಲ್ಲಿ.. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿಸಲು, ಸದ್ವಿಚಾರ ಚಿಂತನೆ, ಒತ್ತಡಗಳಿಂದ ಮುಕ್ತವಾಗಿ ಜ್ಞಾನಾರ್ಜನೆ, ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳು & ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.