ಇಂದು ಕೊರೊನಾ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು.ಈ ವೇಳೆ ಮನವಿ ಮಾಡಿದ ಕೈ ನಾಯಕರು, ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಚಪ್ಪಾಳೆ ತಟ್ಟುವಿಕೆ, ದೀಪ ಬೆಳಗುವಿಕೆ ಹಾಗೂ ಲಾಕ್ಡೌನ್ ಮುಂತಾದ ಎಲ್ಲ ನಿರ್ಣಯಗಳಿಗೆ ನಾವುಗಳು ಸಹಮತವನ್ನು ತೋರುತ್ತಾ ಬಂದಿದ್ದೇವೆ. ಆದರೆ ರೋಗ ಹರಡುವಿಕೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಏರುಮುಖವಾಗಿದೆಯೇ ಹೊರತು ನಿಯಂತ್ರಣಕ್ಕೆ ಬಂದಿರುವ ಸೂಚನೆಗಳು ಕಾಣುತ್ತಿಲ್ಲ. ಅದಕ್ಕೆ ಕಾರಣಗಳನ್ನು ಸರ್ಕಾರವೇ ತಿಳಿಸಬೇಕಾಗಿರುತ್ತದೆ. ಡಬ್ಲ್ಯೂ.ಹೆಚ್.ಓ., ಮಾರ್ಗಸೂಚಿಯ ಪ್ರಕಾರ ಕೊರೋನಾ ರೋಗ ನಿಯಂತ್ರಣಕ್ಕೆ ಪ್ರಾಥಮಿಕವಾಗಿ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ. ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಪ್ರತಿ 10 ಲಕ್ಷಕ್ಕೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಬಂದಿದೆ. ಒಂದು ಕಡೆ ಕೊರೋನಾ ರೋಗ ಪರೀಕ್ಷೆಗೆ ರ್ಯಾಪಿಡ್ ಟೆಸ್ಟ್ ಕಿಟ್ಗಳು ಹಾಗೂ ಪಿ.ಸಿ.ಆರ್. ಮೆಷಿನ್ಗಳ ಕೊರತೆಯಾದರೆ, ಮತ್ತೊಂದು ಕಡೆ ವೈದ್ಯರ, ದಾದಿಯರ ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯವಾಗಿರುವ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, ಪಿ.ಪಿ.ಇ. ಕಿಟ್ ಮುಂತಾದವುಗಳ ಕೊರತೆಯಾಗಿರುತ್ತದೆ. ಒಟ್ಟು 12 ಲಕ್ಷ ಕಿಟ್ಗಳ ಅಗತ್ಯವಿದ್ದರೆ ಈಗ 2,27,000 ಕಿಟ್ಗಳು ಮಾತ್ರ ಲಭ್ಯವಿವೆ. ಎನ್-95 ಮಾಸ್ಕ್ಗಳು ಕೇವಲ 5,46,721 ಮಾತ್ರ ಲಭ್ಯವಿವೆ ಮತ್ತು ಹೈಡ್ರಾಕ್ಸಿ ಕ್ಲೋರಾಕ್ಸಿನ್ ಮಾತ್ರೆಗಳು ಕೇವಲ 2,79,999 ರಷ್ಟು ಲಭ್ಯವಿವೆ.ಇತ್ತೀಚಿನವರೆಗೂ ಕೇವಲ ರಾಜೀವ್ಗಾಂಧಿ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ರಂಗದೊರೈ ಆಸ್ಪತ್ರೆ ಮತ್ತು ಆನಂದ್ ಲ್ಯಾಬ್ಗಳಲ್ಲಿ ಮಾತ್ರ ಕೊರೋನಾ ರೋಗದ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ರಾಜ್ಯದಲ್ಲಿರುವ 18 ಲ್ಯಾಬ್ಗಳಲ್ಲಿ ಕೊರೋನಾ ರೋಗದ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ. ಇವುಗಳ ಪೈಕಿ 9 ಲ್ಯಾಬ್ಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿವೆ ಹಾಗೂ 12,500 ರ್ಯಾಪಿಡ್ ಟೆಸ್ಟ್ ಕಿಟ್ಗಳು ಬರಲಿವೆ ಎಂದು ದಿನಾಂಕ:17-4-2020 ರಂದು ಸರ್ಕಾರ ತಿಳಿಸಿರುತ್ತದೆ. ಇಲ್ಲಿಯವರೆಗೂ ನಮ್ಮ ರಾಜ್ಯಕ್ಕೆ ಕೊರೋನಾ ರೋಗ ಪತ್ತೆಗೆ ಬೇಕಾಗಿರುವ ರ್ಯಾಪಿಡ್ ಟೆಸ್ಟ್ ಕಿಟ್ಗಳು ಲಭ್ಯವಾಗಿರುದಿಲ್ಲ. ಲ್ಯಾಬ್ಗಳ ಮೂಲಕ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ 17,594 ಜನರಿಗೆ ಕೊರೋನಾ ರೋಗ ಪರೀಕ್ಷೆ ಮಾಡಲಾಗಿದೆ.
ವೈದ್ಯಕೀಯ ಸೌಲಭ್ಯಗಳು ಕೊರೋನಾ ರೋಗ ತಡೆಗೆ ಏನೇನೂ ಸಾಲದು. ಇದರಿಂದ ಕೊರೋನಾ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲವೆಂದು ಅನೇಕ ವೈದ್ಯರು, ತಜ್ಞರ ಅಭಿಪ್ರಾಯವಾಗಿರುತ್ತದೆ. ಲಾಕ್ಡೌನ್ ಆಗಿ 25 ದಿನಗಳು ಕಳೆದಿದ್ದರೂ ಜನಸಾಮಾನ್ಯರ ಬದುಕಿಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯಾಡಳಿತ ಸಂಪೂರ್ಣ ವಿಫಲವಾಗಿದೆ. ಆ ಕಾರಣ ಜನರ ಬದುಕು ಅತ್ಯಂತ ದುಸ್ತರವಾಗಿದೆ. ರಾಜ್ಯದ 6 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ಸಂಘಟಿತ ಕಾರ್ಮಿಕರ ಸಂಖ್ಯೆ 21 ಲಕ್ಷಗಳಿದ್ದು, ಅಸಂಘಟಿತ ಕಾರ್ಮಿಕರ ಸಂಖ್ಯೆ ಸುಮಾರು 1 ಕೋಟಿ 32 ಲಕ್ಷ ಇರುತ್ತದೆ. ಇದಲ್ಲದೇ ಕೋಟ್ಯಾಂತರ ಕೃಷಿ ಕಾರ್ಮಿಕರು ರಾಜ್ಯದ ಉದ್ದಗಲಕ್ಕೂ ನೆಲೆಸಿದ್ದಾರೆ ಇವರಷ್ಟೇ ಅಲ್ಲದೇ ಕುಶಲಕರ್ಮಿಗಳಾದ ಸವಿತಾ ಸಮಾಜದವ0ರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರು ಮುಂತಾದವರು ತಮ್ಮ ಜೀವನೋಪಾಯಕ್ಕಾಗಿ ದಿನನಿತ್ಯದ ದುಡಿಮೆಯನ್ನು ಅವಲಂಬಿಸಿ ಬದುಕುತ್ತಿದ್ದರು. ಇವರುಗಳಿಗೆ ದುಡಿಮೆಯಿಲ್ಲದೇ ಅವರ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಗುರಿಯಾಗಿವೆ. ಅನೇಕ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಊರುಗಳಲ್ಲಿ ಜೀವನೋಪಾಯಕ್ಕೆ ದಾರಿಯಿಲ್ಲದೇ ಕಷ್ಟವನ್ನು ಅನುಭವಿಸುತ್ತಿದ್ದಾರೆ.
ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದು, ಅನೇಕರು ಕಾಲ್ನಡಿಗೆಯಲ್ಲೇ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಕೆಲವರು ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸಾವನ್ನಪ್ಪಿರುತ್ತಾರೆ.ಸರ್ಕಾರದ ಮಾಹಿತಿಯ ಪ್ರಕಾರವೇ ಈ ವರ್ಷದ ಬೇಸಿಗೆ ಋತುವಿನಲ್ಲಿ ರಾಜ್ಯದ ಉದ್ದಗಲಕ್ಕೂ ಸುಮಾರು 64,340 ಹೆಕ್ಟೇರ್ ಪ್ರದೇಶದಲ್ಲಿ 17 ಲಕ್ಷದ 38 ಸಾವಿರ ಕ್ವಿಂಟಾಲ್ ಇಳುವರಿಯ ತರಕಾರಿ ಬೆಳೆಗಳು ಮತ್ತು 1,91,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಇಳುವರಿ ಅಂದಾಜು 32,55,969 ಟನ್ಗಳನ್ನು ನಮ್ಮ ರೈತರು ಬೆಳೆದಿದ್ದಾರೆ.ವಿವಿಧ ರೀತಿಯ ಹೂಗಳನ್ನು ಸುಮಾರು 11,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುತ್ತಾರೆ. ಹಾಗೂ ಸುಮಾರು 1,08,168 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆದಿರುತ್ತಾರೆ. ಅದೇ ರೀತಿ ಭತ್ತ, ರಾಗಿ, ಮುಸುಕಿನ ಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಬೆಳೆಗಳನ್ನು ರೈತರು ಬೇಸಿಗೆಯಲ್ಲೂ ಬೆಳೆದಿರುತ್ತಾರೆ. ರೈತರು ಬೆಳೆದಿರುವ ಹೂವು, ತರಕಾರಿ, ಹಣ್ಣು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ, ಮಾರಾಟ ಮಾಡಲು ಲಾಕ್ಡೌನ್ ಅವಧಿಯಲ್ಲಿ ಸಾಧ್ಯವಾಗದೆ ರೈತರ ಹಾಗೂ ರೈತ ಕಾರ್ಮಿಕರ ಬದುಕು ದುಸ್ತರವಾಗಿದೆ.
ಇದರಿಂದ ರೈತರಿಗೆ ಸಾವಿರಾರು ಕೋಟಿ ಬೆಳೆಗಳು ನಷ್ಠವಾಗಿರುತ್ತದೆ. ಮತ್ತೊಂದು ಕಡೆ ಹಣ್ಣು, ಹಂಪಲು, ತರಕಾರಿ, ಹೂವು ಹಾಗೂ ಇನ್ನಿತರೇ ಪದಾರ್ಥಗಳು ದಿನನಿತ್ಯ ಲಭ್ಯವಾಗದೇ ಜನರು ಅದರಲ್ಲೂ ನಗರವಾಸಿಗಳು ಅತ್ಯಂತ ಕಷ್ಟಕ್ಕೆ ಗುರಿಯಾಗಿದ್ದಾರೆ. ಇದರ ಜೊತೆಗೆ ಕೋಳಿ, ಕುರಿ, ಹಂದಿ, ಮೀನು ಮುಂತಾದವುಗಳನ್ನು ಸಾಕಾಣಿಕೆ ಮಾಡುವ ರೈತರೂ ಸಹ ಮಾರುಕಟ್ಟೆಯಿಲ್ಲದೇ ಮತ್ತು ವಿವಿಧ ರೀತಿಯ ಅಪಪ್ರಚಾರಗಳ ಕಾರಣಕ್ಕಾಗಿ ನಷ್ಟಕ್ಕೆ ಗುರಿಯಾಗಿದ್ದಾರೆ. ಈ ಎಲ್ಲಾ ಪದಾರ್ಥಗಳನ್ನು ಕೊಯಿಲು ಮಾಡುವುದಕ್ಕೆ ಮತ್ತು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುತ್ತದೆ. ಇದರಿಂದ ರೈತಾಪಿ ವರ್ಗವು ಅತ್ಯಂತ ಕಷ್ಟಕ್ಕೆ ಗುರಿಯಾಗಿರುತ್ತದೆ.
ರಾಜ್ಯ ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ. ಯುದ್ಧೋಪಾದಿಯಲ್ಲಿ ರಾಜ್ಯದ ಜನರನ್ನು ಕೊರೋನಾ ರೋಗದಿಂದ ದೂರ ಮಾಡುವ ವ್ಯವಸ್ಥೆ ಮಾಡಬೇಕು.ಜನರ ಸಂಕಷ್ಟಕ್ಕೆ ಎಲ್ಲಾ ರೀತಿಯ ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕೂಡಲೇ ಸುಸಜ್ಜಿತವಾದ ಲ್ಯಾಬ್ ಅನ್ನು ತೆರೆಯಲು ಕ್ರಮ ಜರುಗಿಸುವುದು ಜೊತೆಗೆ ಉತ್ತಮ ಗುಣಮಟ್ಟದ ರ್ಯಾಪಿಡ್ ಟೆಸ್ಟ್ ಕಿಟ್ಗಳು, ಪಿ.ಪಿ.ಇ. ಕಿಟ್ಗಳು, ಗ್ಲೌಸ್ಗಳು, ಸ್ಯಾನಿಟೈಜರ್ಸ್, ಔಷಧಿಗಳು ಹಾಗೂ ಸಾಕಷ್ಟು ಪ್ರಮಾಣದ ವೈದ್ಯರು, ದಾದಿಯರು ಹಾಗೂ ಇನ್ನಿತರ ಸಿಬ್ಬಂದಿಯನ್ನು ಒದಗಿಸಬೇಕು. ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಮುಂತಾದ ಸಿಬ್ಬಂದಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಸಂಬಳವನ್ನು ನೀಡಿರುವುದಿಲ್ಲವೆಂದು ತಿಳಿದುಬಂದಿರುತ್ತದೆ. ಕೂಡಲೇ ಸರ್ಕಾರ ಅವರುಗಳ ಸಂಬಳವನ್ನು ಪಾವತಿಸುವುದು ಮತ್ತು ಅವರುಗಳಿಗೆ ವಿಶೇಷ ಭತ್ಯೆಯನ್ನು (ಕನಿಷ್ಠ ಸಂಬಳದ ಎರಡು ಪಟ್ಟು) ನೀಡಬೇಕು. ಅಲ್ಲದೆ ಇನ್ನೂ ಕೆಲ ವಿಚಾರಗಳಲ್ಲಿ ಸರ್ಕಾರ ಸ್ಪಂದಿಸಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ.