ಮೆಗಾಸ್ಟಾರ್ ಚಿರಂಜೀವಿ ಜನ್ಮದಿನ : ಹೊಸ ಸಿನಿಮಾ ಟೈಟಲ್ ಲಾಂಚ್
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ..! ಬಹುಶಃ ಈ ಹೆಸರನ್ನು ಕೇಳಿರದ ದಕ್ಷಿಣ ಭಾರತೀಯ ಇರಲಾರ. ಯಾಕೆಂದ್ರೆ ಬೆಳ್ಳಿ ಪರದೆ ಮೇಲೆ ಕೊನಿದೆಲಾ ಶಿವಶಂಕರವರ ಪ್ರಸಾದ್ ಮಾಡಿದರುವ ಮೋಡಿ ಅಂತಹದ್ದು. ಕೇವಲ ಸ್ವಯಂಕೃಷಿಯಿಂದ ಬೆಳೆದು ಮಿಂಚುತ್ತಿರುವ ಧ್ರುವ ತಾರೆ ಮೆಗಾಸ್ಟಾರ್ ಚಿರಂಜೀವಿ. ಕನ್ನಡಿಯಲ್ಲಿ ಮುಖ ನೋಡಿಕೋ ಎಂದು ಕಾಲೆಳೆದವರಿಂದಲೇ ಬಿಗ್ ಬಾಸ್ ಎನಿಸಿಕೊಂಡ `ವಿಜೇತ’ ಮೆಗಾಸ್ಟಾರ್.
ತೆಲುಗು ಸಿನಿಮಾ ಇಂಡಸ್ಟ್ರಿ ಸಾಕಷ್ಟು ನಟರನ್ನು ಅಪ್ಪಿತಬ್ಬಿ ಒಪ್ಪಿಕೊಂಡಿದೆ. ಆದ್ರೆ ಮೆಗಾಸ್ಟಾರ್ ಚಿರಂಜೀವಿಯನ್ನು ಮಾತ್ರ ತನ್ನ ಹೆಗಲಮೇಲಿಟ್ಟುಕೊಂಡು ಮೆರೆಸಿದೆ. ಇದಕ್ಕೆ ಚಿರಂಜೀವಿ ಅವರ ನಡೆ, ನುಡಿ, ಶ್ರಮ ಪ್ರಮುಖ ಕಾರಣಗಳು. ಹೌದು..! ಚಿರಂಜೀವಿ ಭಾರತೀಯ ಚಿತ್ರರಂಗದ ಅಜಾತಶತ್ರು. ಹಿರಿಯರಿಗೆ ನಮಿಸುವ ಕಿರಿಯರಿಗೆ ಆರ್ಶೀವದಿಸಿ ಪ್ರೋತ್ಸಾಹಿಸುವ ಮೆಗಾಸ್ಟಾರ್ ಅಂದ್ರೆ ಆರು ವರ್ಷದ ಬಾಲಕನಿಂದ ಆರವತ್ತರ ವ್ಯಕ್ತಿಯವರೆಗೂ ಎಲ್ಲರಿಗೂ ಅಚ್ಚುಮೆಚ್ಚು.
ಅಂದಹಾಗೆ ಇಂದು ಚಿರಂಜೀವಿಗೆ ಇಂದು ಜನ್ಮ ದಿನದ ಸಂಭ್ರಮ. 67ನೇ ವರ್ಷಕ್ಕೆ ಕಾಲಿಟ್ಟ ಮೆಗಾಸ್ಟಾರ್ ಗೆ ನಟರು, ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಬೆಳ್ಳಿಪರದೆ ಮೇಲೆ ತಮ್ಮದೇಯಾದ ಛಾಪು ಮೂಡಿಸಿರುವ ಚಿರಂಜೀವಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಭಿಮಾನಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ರಾಜಕೀಯಕ್ಕೂ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಚುನಾವಣಾ ರಾಜಕೀಯದಲ್ಲಿ ಸೋಲು-ಗೆಲುವು ಕಂಡ ನಾಯಕನಾಗಿ ಹೊರಹೊಮ್ಮಿದ್ದಾರೆ.
ಚಿರಂಜೀವಿ ಜನ್ಮದಿನದ ಹಿನ್ನೆಲೆ ಅವರು ಸಾಕಷ್ಟು ಹೊಸ ಚಿತ್ರಗಳನ್ನು ಘೋಷಿಸುತ್ತಿದ್ದಾರೆ. ನಿನ್ನೆ 153ನೇ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದ ಚಿರು ಇಂದು ಬೋಲಾ ಶಂಕರ್ ಅಂತ ಎಲ್ಲರ ಮುಂದೆ ಬರುವುದಾಗಿ ಘೋಷಿಸಿದ್ದಾರೆ. ನಟ ಮಹೇಶ್ ಬಾಬು ಈ ಚಿತ್ರ ಟೈಟಲ್ ಅನಾವರಣಗೊಳಿಸಿ, ಮೆಗಾಸ್ಟಾರ್ ಗೆ ಶುಭಾಶಯ ಕೋರಿದ್ದಾರೆ.
ಇದಲ್ಲದೆ ಇಂದು 2 ಗಂಟೆ ಸುಮಾರಿಗೆ ಮತ್ತೊಂದು ಸಿನಿಮಾ ಘೋಷಣೆ ಆಗಲಿದೆ. ಆ ಸಿನಿಮಾ ಮೈತ್ರಿ ಮೂವಿಸ್ ಬಂಡವಾಳ ಹೂಡುತ್ತಿದ್ದು, ಅದು ಪ್ಯಾನ್ ಇಂಡಿಯಾ ಎಂದು ಹೇಳಲಾಗುತ್ತಿದೆ.









