ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಸೀದಿಗಳು ಮತ್ತು ಅಲ್ಲಿನ ಧಾರ್ಮಿಕ ಮುಖಂಡರ (ಇಮಾಮ್‌ಗಳು) ವಿವರಗಳನ್ನು ಸಂಗ್ರಹಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೀದಿಗಳ ಮೇಲೆ ಕಣ್ಣಿಡುವ ಮೊದಲು, ದೇಶದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸುವ ದೇವಸ್ಥಾನಗಳ ಸಮೀಕ್ಷೆ ನಡೆಸಲಿ ಎಂದು ಅವರು ಕೇಂದ್ರ ಸರ್ಕಾರಕ್ಕೆ ನೇರ ಸವಾಲ್ ಹಾಕಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಮಸೀದಿಗಳ ಸಮೀಕ್ಷೆ ನಡೆಸುತ್ತಿರುವ ಕ್ರಮವನ್ನು ಕಟುವಾಗಿ ಟೀಕಿಸಿರುವ ಮುಫ್ತಿ, ಇದು ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ಹುನ್ನಾರ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೊದಲು ದೇವಾಲಯಗಳ ಪ್ರೊಫೈಲ್ ತಯಾರಿಸಿ
ಸರ್ಕಾರದ ಕ್ರಮಕ್ಕೆ ತಿರುಗೇಟು ನೀಡಿರುವ ಮೆಹಬೂಬಾ ಮುಫ್ತಿ, ಸರ್ಕಾರಕ್ಕೆ ಧಾರ್ಮಿಕ ಸ್ಥಳಗಳ ಪ್ರೊಫೈಲ್ ಮಾಡುವ ಅಥವಾ ಮಾಹಿತಿ ಕಲೆಹಾಕುವ ಉಮೇದಿದ್ದರೆ ಅದನ್ನು ಮೊದಲು ದೇವಸ್ಥಾನಗಳಿಂದಲೇ ಆರಂಭಿಸಲಿ. ದೇಶದ ಯಾವ ದೇವಸ್ಥಾನಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶವಿದೆ ಮತ್ತು ಎಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಅವಕಾಶವಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಲಿ. ದಲಿತರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡುವ ಸಲುವಾಗಿ ಪುರೋಹಿತರು ಹಣ ಪಡೆಯುತ್ತಿರುವ ದೇವಸ್ಥಾನಗಳ ಪಟ್ಟಿಯನ್ನು ಮೊದಲು ತಯಾರಿಸಿ ಎಂದು ಆಗ್ರಹಿಸಿದ್ದಾರೆ.
ಮಸೀದಿಗಳನ್ನು ಅಪರಾಧ ಕೇಂದ್ರಗಳನ್ನಾಗಿಸುವ ಷಡ್ಯಂತ್ರ
ಈಗಾಗಲೇ ವಕ್ಫ್ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಸಮುದಾಯದಲ್ಲಿ ಆತಂಕ ಸೃಷ್ಟಿಸಲಾಗಿದೆ. ಈಗ ಮಸೀದಿಗಳ ಮೇಲೆ ಕಣ್ಣಿಡುವ ಮೂಲಕ ಅವುಗಳನ್ನು ಅಪರಾಧದ ಸ್ಥಳಗಳಂತೆ ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಇದು ಕೇವಲ ಕಾಶ್ಮೀರಕ್ಕೆ ಸೀಮಿತವಾದ ವಿಷಯವಲ್ಲ, ಈ ಮಾದರಿಯನ್ನು ದೇಶಾದ್ಯಂತ ಜಾರಿಗೆ ತರುವ ದೊಡ್ಡ ಷಡ್ಯಂತ್ರದ ಭಾಗವಾಗಿದೆ. ಇದೇ ರೀತಿಯ ಕಠಿಣ ನಿಯಮಗಳನ್ನು ಮತ್ತು ಮಾಹಿತಿ ಕಲೆಹಾಕುವ ಪ್ರಕ್ರಿಯೆಯನ್ನು ಗುರುದ್ವಾರಗಳು, ಚರ್ಚ್‌ಗಳು ಹಾಗೂ ದೇವಸ್ಥಾನಗಳ ಮೇಲೂ ಪ್ರಯೋಗಿಸಲು ಸರ್ಕಾರಕ್ಕೆ ಧೈರ್ಯವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಏನಿದು ವಿವಾದ? ಪೊಲೀಸರು ಕೇಳಿದ್ದೇನು?
ಕಾಶ್ಮೀರದಲ್ಲಿರುವ ಮಸೀದಿಗಳು ಯಾವ ಸಿದ್ಧಾಂತ ಅಥವಾ ಪಂಥವನ್ನು (School of Thought) ಅನುಸರಿಸುತ್ತಿವೆ, ಅಲ್ಲಿನ ಇಮಾಮ್‌ಗಳು ಮತ್ತು ಧರ್ಮಗುರುಗಳ ಹಿನ್ನೆಲೆ ಏನು, ಮಸೀದಿಯ ಆರ್ಥಿಕ ಮೂಲ ಯಾವುದು ಎಂಬಿತ್ಯಾದಿ ವಿವರಗಳನ್ನು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಮಸೀದಿ ನಿರ್ಮಿಸಲಾಗಿರುವ ಜಮೀನಿನ ಕಂದಾಯ ದಾಖಲೆಗಳು ಮತ್ತು ಆಡಳಿತ ಮಂಡಳಿಯ ಸದಸ್ಯರ ವಿವರಗಳನ್ನು ಸಹ ಕೇಳಲಾಗಿದೆ. ಮದರಸಾಗಳಿಗೂ ಇದೇ ರೀತಿಯ ಸೂಚನೆ ನೀಡಲಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣ ಹಾಗೂ ವೈಟ್-ಕಾಲರ್ ಭಯೋತ್ಪಾದನಾ ಜಾಲದ ಆರೋಪದ ಮೇಲೆ ಶ್ರೀನಗರದ ಮಸೀದಿಯೊಂದರ ಇಮಾಮ್ ಮೌಲ್ವಿ ಇರ್ಫಾನ್ ಅಹ್ಮದ್ ವಾಗೆ ಅವರನ್ನು ನವೆಂಬರ್ 10 ರಂದು ಬಂಧಿಸಲಾಗಿತ್ತು. ಈ ಘಟನೆಯ ಬಳಿಕ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ಮಸೀದಿಗಳ ಮೇಲೆ ನಿಗಾ ಇರಿಸಲು ಈ ಪ್ರೊಫೈಲಿಂಗ್ ಕಾರ್ಯವನ್ನು ಆರಂಭಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದು ಆರ್‌ಎಸ್‌ಎಸ್ ಅಜೆಂಡಾ: ಸಂಸದ ಅಗಾ ರುಹುಲ್ಲಾ
ಈ ನಿರ್ಧಾರವನ್ನು ಶ್ರೀನಗರದ ಸಂಸದ ಅಗಾ ರುಹುಲ್ಲಾ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಇದು ಧಾರ್ಮಿಕ ನಂಬಿಕೆಯ ಕೇಂದ್ರಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿದೆ. ಇಮಾಮ್‌ಗಳನ್ನು ಬೆದರಿಸುವ ಮೂಲಕ ಧಾರ್ಮಿಕ ಆಚರಣೆಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಬಿಜೆಪಿ ಮತ್ತು ಅದರ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ನ ಅನುಮತಿಯ ನಂತರವೇ ಇಮಾಮ್‌ಗಳು ಧರ್ಮೋಪದೇಶ ನೀಡಬೇಕೇ ಎಂಬ ಪರಿಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಅವರು ಕಿಡಿಕಾರಿದ್ದಾರೆ.








