Mekedatu | ನಮ್ಮ ಪಾಲಿನ ನೀರು ಬಳಕೆ ಮಾಡಿಕೊಳ್ಳುವುದು ನಮ್ಮ ಹಕ್ಕು
ಬೆಂಗಳೂರು : ಕಾವೇರಿ ನದಿಯ ನಮ್ಮ ಪಾಲಿನ ನೀರು ಬಳಕೆ ಮಾಡಿಕೊಳ್ಳುವುದು ನಮ್ಮ ಹಕ್ಕು. ಮೇಕೆದಾಟು ಯೋಜನೆ ಬಗ್ಗೆ ಕಾನೂನಾತ್ಮಕವಾಗಿ ತಮಿಳುನಾಡು ಆಕ್ಷೇಪ ಎತ್ತಲು ಸಾಧ್ಯವಿಲ್ಲ. ಈ ಬಗ್ಗೆ ತಮಿಳುನಾಡು ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ತನ್ನ ಪಾಲಿನ ಕಾವೇರಿ ನದಿ ನೀರನ್ನು ಕರ್ನಾಟಕ ಹೇಗೆ ಬೇಕಾದರೂ ಬಳಸಿಕೊಳ್ಳಲಿ ಎಂದು ಈಗಾಗಲೇ ತಮಿಳುನಾಡು ಹೇಳಿದೆ. ಅಗತ್ಯಬಿದ್ದರೆ ಕಾವೇರಿಗೆ ಇನ್ನೊಂದು ಅಣೆಕಟ್ಟು ಕಟ್ಟಿಕೊಳ್ಳಲಿ, ತಕರಾರಿಲ್ಲ ಎಂದು ಸುಪ್ರೀಂ ಕೋರ್ಟ್ʼಗೆ ತಮಿಳುನಾಡು ವಕೀಲರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ
ಪರಿಸರಾತ್ಮಕ ಒಪ್ಪಿಗೆಯನ್ನಷ್ಟೇ ಕೇಂದ್ರ ಸರಕಾರ ನೀಡಬೇಕಿದೆ. ಉಳಿದಂತೆ ನಾವು ಯಾರ ಮರ್ಜಿಗೂ ಕಾಯಬೇಕಿಲ್ಲ. ಆ ಅರಿವಿದ್ದೂ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕರ್ನಾಟಕ-ತಮಿಳುನಾಡು ರಾಜ್ಯಗಳು ಮಾತುಕತೆಯಿಂದ ʼಬಿಕ್ಕಟ್ಟುʼ ಬಗೆಹರಿಸಿಕೊಳ್ಳಿ ಎಂದಿದ್ದಾರೆ!
ಅಗತ್ಯಬಿದ್ದರೆ ಕೇಂದ್ರ ಮಧ್ಯಸ್ಥಿಕೆ ವಹಿಸಲಿದೆ ಎಂದು ಕೇಂದ್ರ ಸಚಿವರು ಹೇಳಿರುವುದು ಅನಗತ್ಯ. ಕೇಂದ್ರ ಸರಕಾರವು ತಮಿಳುನಾಡಿನ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದು ಪದೇಪದೆ ಹೇಳುವುದೇಕೆ? ನಾವು ನಾವೇ ಕೂತು ಚರ್ಚೆ ಮಾಡೋದಾದರೆ ಕೇಂದ್ರ ಜಲ ಆಯೋಗ (CWC) ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ನನ್ನ ಅಭಿಪ್ರಾಯ ಇಷ್ಟೇ. ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಯೋಜನೆ ವಿಷಯದಲ್ಲಿ ಕರ್ನಾಟಕವು ತಮಿಳುನಾಡು ಜತೆ ಮಾತುಕತೆ ನಡೆಸುವ ಅಗತ್ಯವೇ ಇಲ್ಲ ಮತ್ತು ಅವರ ಒಪ್ಪಿಗೆಯೂ ಬೇಕಿಲ್ಲ.
ಕೇಂದ್ರ ಸಚಿವರ ಹೇಳಿಕೆ ನನಗೆ ಅಚ್ಚರಿ ತಂದಿದೆ. ಸರಕಾರ ಕೂಡಲೇ ಆಕ್ಷೇಪ ದಾಖಲಿಸಬೇಕು. ರಾಜ್ಯದ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಶ್ರೀ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ಪತ್ರ ಬರೆದಿದ್ದರು. ಆದರ ಅಗತ್ಯ ಇರಲಿಲ್ಲ.
ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಹತ್ವದ ಪತ್ರ ಬರೆದು ಮೇಕೆದಾಟು ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ. ಈ ಸಲಹೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಜೊತೆಗೆ ಮೇಕೆದಾಟು ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿದಾಗ 9,000 ಕೋಟಿ ರೂ. ಅಂದಾಜು ವೆಚ್ಚವಿತ್ತು. ಈಗ ಅದು 12,000 ಕೋಟಿ ರೂ.ಗೆ ಹೋಗಿದೆ. ದಿನ ಕಳೆದಂತೆ ವೆಚ್ಚ ಇನ್ನೂ ಏರಿಕೆಯಾಗಲಿದೆ. ಈ ಬಗ್ಗೆ ಸರಕಾರ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
mekedatu-H D Kumaraswamy reaction