ಶ್ರೀನಗರ: ಪುಲ್ವಾಮದಲ್ಲಿ 2019ರ ಫೆ. 14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಸ್ಮರಣಾರ್ಥ ಕೇಂದ್ರ ಮೀಸಲು ಪೊಲೀಸ್ ಪಡೆ ಸ್ಮಾರಕ ಸ್ತಂಭ ಸಮರ್ಪಣೆ ಮಾಡಿ ಗೌರವ ಸಲ್ಲಿಸಲಿದೆ. ಪುಲ್ವಾಮದ ಲೆಟ್‌ಪೋರಾ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ಈ ಸಮಾರಂಭ ನಡೆಯಲಿದ್ದು, ಸಿಆರ್‌ಪಿಎಫ್‌ನ ವಿಶೇಷ ಮಹಾ ನಿರ್ದೇಶಕ ಜೂಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇಂದಿನ ಸಮಾರಂಭದ ಈ ಕುರಿತು ಜೂಲ್ಫಿಕರ್ ಹಸನ್ ಮಾಹಿತಿ ನೀಡಿದ್ದು, ‘ವೀರಯೋಧರಿಗೆ ಗೌರವ ಸಮರ್ಪಣೆ ಮಾಡುವ ಈ ಸಮಾರಂಭದಲ್ಲಿ, ಸ್ಮಾರಕ ಸ್ತಂಭವನ್ನು ಅನಾವರಣ ಮಾಡಲಾಗುತ್ತದೆ. ಈ ಸ್ತಂಭದ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಬರೆಯಲಾಗಿದೆ. ಇದೇ ಸಮಾರಂಭದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ,’ ಎಂದು ಹೇಳಿದ್ದಾರೆ.
‘ಯೋಧರು ಹುತಾತ್ಮರಾದ ಈ ದಿನ ಅವರ ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗುತ್ತವೆ. ಹಾಗಾಗಿಯೇ ಈ ಸಮಾರಂಭಕ್ಕೆ ಯೋದರ ಕುಟುಂಬಸ್ಥರನ್ನು ಆಹ್ವಾನಿಸಿಲ್ಲ,’ ಎಂದು ಹಸನ್ ತಿಳಿಸಿದರು.