ಬೆಂಗಳೂರು : ಕೊರೊನಾಸುರನ ಕಾಟಕ್ಕೆ ಲಾಕ್ ಡೌನ್ ಮಾಡಲಾಗಿತ್ತು. ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಇದನ್ನು ಸರಿ ಪಡಿಸಲು ರಾಜ್ಯ ಸರ್ಕಾರ ವೆಚ್ಚವನ್ನು ಕಡಿತ ಮಾಡಲು ಮುಂದಾಗಿದೆ. ಅದರ ಭಾಗವಾಗಿ ಸರ್ಕಾರದ ಕೆಲ ಇಲಾಖೆಗಳನ್ನು ವಿಲೀನ ಮಾಡಲು ಮತ್ತು ಸರ್ಕಾರಿ ನೌಕರರ ಡಿಎಗೆ ತಡೆ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಇಲಾಖೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ ಮತ್ತು ಲೆಕ್ಕ ಪತ್ರ ಇಲಾಖೆ ಸೇರಿದಂತೆ ಇಲಾಖೆಗಳನ್ನು ವಿಲೀನ ಮಾಡಲು ಸರ್ಕಾರ ಮುಂದಾಗಿದೆ. ಅಲ್ಲದೆ ಇಲಾಖೆಯ ಕೆಲ ಹುದ್ದೆಗಳನ್ನು ರದ್ದುಗೊಳಿಸುವ ಯೋಜನೆ ಸರ್ಕಾರದ ಮುಂದಿದೆ. ವಿಲೀನ್ ಮತ್ತು ವೆಚ್ಚ ಕಡಿತದ ಸಾಧಕ ಭಾದಕಗಳ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದ ಸರ್ಕಾರ ರಚಿಸಿದೆ. ಮತ್ತೊಂದೆಡೆ ಲಾಕ್ ಡೌನ್ ನಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟು ಎದುರಿಸುತ್ತಿದೆ. ಇದನ್ನು ಸರಿದೂಗಿಸಲು ಸರ್ಕಾರ ದುಂದು ವೆಚ್ಚ ಕಡಿತದ ಮೊರೆ ಹೋಗಿದೆ. ಈಗಾಗಲೇ ಆರ್ಥಿಕ ಇಲಾಖೆಗೆ ಅಗತ್ಯ ವೆಚ್ಚಗಳು ಬಿಟ್ಟು ಬೇರೆ ಯಾವುದೇ ಖರ್ಚು-ವೆಚ್ಚಗಳನ್ನು ಮಾಡದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಆದ್ದರಿಂದ ರಾಜ್ಯ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) 2021ರ ಜುಲೈ ವರೆಗೆ ತಡೆ ಹಿಡಿದಿದೆ. ಅಲ್ಲದೆ ಸರ್ಕಾರಿ ನೌಕರರ ಗಳಿಕೆ ರಜೆಗೂ ಕತ್ತರಿ ಹಾಕಿದೆ. ಗಳಿಕೆ ರಜೆಯನ್ನು ಸಂಬಳವಾಗಿ ಪರಿವರ್ತಿಸುವ ಅವಕಾಶಕ್ಕೂ ಬ್ರೇಕ್ ಹಾಕಲಾಗಿದೆ. ಲಾಕ್ಡೌನ್ ಹಿನ್ನೆಲೆ ಜನರ ಸಂಕಷ್ಟ, ಸರ್ಕಾರದ ಆರ್ಥಿಕ ಸಂಕಷ್ಟ ನೋಡಿ ಸರ್ಕಾರದ ಕಠಿಣ ನಿರ್ಧಾರಗಳನ್ನು ನೌಕರರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿರೂ ಆದಷ್ಟು ಬೇಗ ಡಿಎ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಸರ್ಕಾರದ ಕೆಲ ಇಲಾಖೆಗಳ ವಿಲೀನ ಪ್ರಕ್ರಿಯೇಗೆ ನೌಕರರು ಅಸಮಾಧಾನ ಹೊಂದಿದ್ದಾರೆ. ಸರ್ಕಾರಿ ನೌಕರರ ಸಂಘದ ಸದಸ್ಯರು ಇಲಾಖೆಗಳ ವಿಲೀನ ಕ್ರಮವನ್ನು ವಿರೋಧಿಸಿ ಮತ್ತು ಹುದ್ದೆಗಳನ್ನು ರದ್ದು ಮಾಡದಿರುವಂತೆ ಆಗ್ರಹಿಸಿ ವಿಧಾನಸೌಧದಲ್ಲೇ ಮೌನ ಧರಣಿ ನಡೆಸಲೂ ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವಾಲಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ ಹೇಳಿದ್ದಾರೆ.








