ಎಂ.ಇ.ಎಸ್ ಪುಂಡರು ನಮ್ಮ ರಾಜ್ಯದಲ್ಲಿ ಇರಲು ಅರ್ಹರೇ ಅಲ್ಲ : ಸಿದ್ದರಾಮಯ್ಯ Siddaramaiah saaksha tv
ಬೆಳಗಾವಿ : ಸೌಹಾರ್ದತೆ ಹಾಳುಗೆಡವುದರಲ್ಲಿ ಎಂ.ಇ.ಎಸ್ ನವರು ನಿಸ್ಸೀಮರು. ಕನ್ನಡದ ನೆಲ, ಜಲ ಬೇಕು ಎನ್ನುವ ಎಂ.ಇ.ಎಸ್ ಪುಂಡರು ನಮ್ಮ ರಾಜ್ಯದಲ್ಲಿ ಇರಲು ಅರ್ಹರೇ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆಯನ್ನು ಕನ್ನಡಿಗರು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಕನ್ನಡಿಗರ ಉದಾರತೆಯನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳುವ ಎಂ.ಇ.ಎಸ್ ಅನ್ನು ನಿಷೇಧಿಸುವ ಕುರಿತು ರಾಜ್ಯ ಬಿಜೆಪಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ವಿರೂಪಗೊಳಿಸಿದ ಮತ್ತು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಘಟನೆ ಸಂಬಂಧ ಖಂಡನಾ ನಿರ್ಣಯ ಅಂಗೀಕರಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ವಿರೂಪಗೊಳಿಸುವವರು ಕಿಡಿಗೇಡಿಗಳು, ಬುದ್ಧಿಗೇಡಿಗಳು ಮಾತ್ರ. ದೇಶದ ಇತಿಹಾಸ, ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನವನ್ನು ಗೌರವಿಸದ ಪುಂಡು, ಪೋಕರಿಗಳನ್ನು ಗಡಿಪಾರು ಮಾಡಬೇಕು.
ಸೌಹಾರ್ದತೆ ಹಾಳುಗೆಡವುದರಲ್ಲಿ ಎಂ.ಇ.ಎಸ್ ನವರು ನಿಸ್ಸೀಮರು. ಕನ್ನಡದ ನೆಲ, ಜಲ ಬೇಕು ಎನ್ನುವ ಎಂ.ಇ.ಎಸ್ ಪುಂಡರು ನಮ್ಮ ರಾಜ್ಯದಲ್ಲಿ ಇರಲು ಅರ್ಹರೇ ಅಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಜೈಲಿಗೆ ಕಳುಹಿಸಬೇಕು.
ಕನ್ನಡ ಧ್ವಜಕ್ಕೆ ಅವಮಾನ ಆಗಿರುವ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕು. ಮುಂದೆ ಇಂತಹಾ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.









