ಕೋಲ್ಕತ್ತಾ: ಫುಟ್ಬಾಲ್ ಲೋಕದ ಮಾಂತ್ರಿಕ, ಅರ್ಜೆಂಟೀನಾದ ವಿಶ್ವವಿಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿಯವರ ಕೋಲ್ಕತ್ತಾ ಭೇಟಿ ಕ್ರೀಡಾ ಹಬ್ಬವಾಗುವ ಬದಲು ದಾಂಧಲೆಯಲ್ಲಿ ಅಂತ್ಯಗೊಂಡಿದೆ. ಮೆಸ್ಸಿ ಮೇಲಿನ ಅಭಿಮಾನವು ಆಕ್ರೋಶವಾಗಿ ಮಾರ್ಪಟ್ಟ ಪರಿಣಾಮ ಸಾಲ್ಟ್ ಲೇಕ್ ಕ್ರೀಡಾಂಗಣವು ಅಕ್ಷರಶಃ ಯುದ್ಧಭೂಮಿಯಂತೆ ಭಾಸವಾಯಿತು. ಅವ್ಯವಸ್ಥೆಯ ಕಾರಣಕ್ಕಾಗಿ ಕಾರ್ಯಕ್ರಮದ ಆಯೋಜಕರನ್ನು ಪೊಲೀಸರು ಬಂಧಿಸಿದ್ದು, ಟಿಕೆಟ್ ಹಣವನ್ನು ಹಿಂತಿರುಗಿಸುವಂತೆ ಕಠಿಣ ಆದೇಶ ನೀಡಲಾಗಿದೆ.
ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಆಗಮಿಸಿದ್ದ ಲಿಯೋನೆಲ್ ಮೆಸ್ಸಿ ಶನಿವಾರ ಬೆಳಗ್ಗೆ ಕೋಲ್ಕತ್ತಾಗೆ ಕಾಲಿಡುತ್ತಿದ್ದಂತೆ ನಗರದಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ, ಮಧ್ಯರಾತ್ರಿಯಿಂದಲೇ ಸಾವಿರಾರು ಫುಟ್ಬಾಲ್ ಪ್ರೇಮಿಗಳು ತಮ್ಮ ನೆಚ್ಚಿನ ತಾರೆಯನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದರು. ಇಡೀ ಕೋಲ್ಕತ್ತಾ ನಗರವು ಸಂಪೂರ್ಣ ಮೆಸ್ಸಿ ಮಯವಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ, ಬೆಳಗ್ಗೆ 10.30ಕ್ಕೆ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರೊಂದಿಗೆ ಲೇಕ್ಟೌನ್ನಲ್ಲಿ ನಿರ್ಮಿಸಲಾದ ಬರೋಬ್ಬರಿ 70 ಅಡಿ ಎತ್ತರದ ಮೆಸ್ಸಿ ಪ್ರತಿಮೆಯನ್ನು ವರ್ಚುವಲ್ ಆಗಿ ಅನಾವರಣಗೊಳಿಸಲಾಯಿತು. ಭದ್ರತಾ ಕಾರಣಗಳ ನೆಪವೊಡ್ಡಿ ಮೆಸ್ಸಿ ಸ್ಥಳಕ್ಕೆ ಖುದ್ದು ಹೋಗದಿರುವುದು ಅಭಿಮಾನಿಗಳಲ್ಲಿ ಸಣ್ಣ ಅಸಮಾಧಾನ ಮೂಡಿಸಿತ್ತು.
ಕ್ರೀಡಾಂಗಣದಲ್ಲಿ ಸ್ಪೋಟಗೊಂಡ ಆಕ್ರೋಶ
ನಂತರ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಮೆಸ್ಸಿ ಆಗಮಿಸಿದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಆದರೆ, ದುಬಾರಿ ಬೆಲೆಯ ಟಿಕೆಟ್ ಖರೀದಿಸಿ, ತಮ್ಮ ಆರಾಧ್ಯ ದೈವ ಮೈದಾನದಲ್ಲಿ ಚೆಂಡನ್ನು ಒದೆಯುವುದನ್ನು ನೋಡಲು ಬಂದಿದ್ದ ಪ್ರೇಕ್ಷಕರಿಗೆ ಕಾದಿದ್ದದ್ದು ಬರೀ ನಿರಾಸೆ. ಮೆಸ್ಸಿ ಕೇವಲ ಅಭಿಮಾನಿಗಳತ್ತ ಕೈಬೀಸಿ ಅಲ್ಲಿಂದ ನಿರ್ಗಮಿಸಿದರು.
ಮೆಸ್ಸಿ ಮೈದಾನದಿಂದ ಹೊರಹೋಗುತ್ತಿದ್ದಂತೆ ಅಭಿಮಾನಿಗಳ ತಾಳ್ಮೆಯ ಕಟ್ಟೆ ಒಡೆಯಿತು. ಸಾವಿರಾರು ರೂಪಾಯಿ ಸುರಿದು ಬಂದಿದ್ದ ಪ್ರೇಕ್ಷಕರು ತಮಗೆ ಮೋಸವಾಗಿದೆ ಎಂದು ಭಾವಿಸಿ ರೊಚ್ಚಿಗೆದ್ದರು. ಆಕ್ರೋಶಗೊಂಡ ಜನಸಾಗರ ಏಕಾಏಕಿ ಮೈದಾನಕ್ಕೆ ನುಗ್ಗಿ, ಕುರ್ಚಿಗಳನ್ನು ಕಿತ್ತು ಎಸೆದು, ಕೈಗೆ ಸಿಕ್ಕ ವಸ್ತುಗಳನ್ನು ಪುಡಿಮಾಡಿ ಕ್ರೀಡಾಂಗಣವನ್ನು ರಣರಂಗವಾಗಿಸಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ಬಂಗಾಳ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾದರು. ಈ ಅನಾಹುತ ಮತ್ತು ಅವ್ಯವಸ್ಥೆಗೆ ನೇರ ಹೊಣೆಗಾರರನ್ನಾಗಿ ಮಾಡಿ ಕಾರ್ಯಕ್ರಮದ ಪ್ರಮುಖ ಆಯೋಜಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಮೋಸಹೋದ ಮತ್ತು ನಿರಾಶೆಗೊಂಡ ಪ್ರೇಕ್ಷಕರಿಗೆ ಅವರ ಟಿಕೆಟ್ ಹಣವನ್ನು ಕೂಡಲೇ ಮರುಪಾವತಿಸುವಂತೆ ಆಯೋಜಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಫುಟ್ಬಾಲ್ ದಿಗ್ಗಜನನ್ನು ಸ್ವಾಗತಿಸಲು ಸಜ್ಜಾಗಿದ್ದ ಐತಿಹಾಸಿಕ ಕೋಲ್ಕತ್ತಾ ನಗರವು, ಆಯೋಜಕರ ಎಡವಟ್ಟಿನಿಂದಾಗಿ ಅಭಿಮಾನಿಗಳ ದಾಂಧಲೆಗೆ ಸಾಕ್ಷಿಯಾಗುವಂತಾಯಿತು.








