ನವದೆಹಲಿ : ತೃತೀಯ ಲಿಂಗಿಗಳ ತಾರತಮ್ಯ ಕೊನೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅರೆಸೈನಿಕ ಪಡೆಗಳಲ್ಲಿ ಟ್ರಾನ್ಸ್ ಜೆಂಡರ್ ಸಮುದಾಯದವರ ನೇಮಕಕ್ಕೆ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಅರೆಸೈನಿಕ ಪಡೆಗಳ ವಿವಿಧ ಶಾಖೆಗಳ ಅಭಿಪ್ರಾಯವನ್ನು ಕೋರಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್), ಇಂಡೋ – ಟಿಬೆಟ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಮುಖ್ಯಸ್ಥರಿಗೆ ಅಭಿಪ್ರಾಯ ತಿಳಿಸುವಂತೆ ಪತ್ರ ಬರೆದಿದೆ.
ಡಿಸೆಂಬರ್ ನಲ್ಲಿ ಸಹಾಯಕ ಕಮಾಂಡೆಂಟ್ ಗಳ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಅರೆಸೈನಿಕ ಪಡೆಗಳ ವಿವಿಧ ಶಾಖೆಗಳ ಪ್ರತಿಕ್ರಿಯೆ ಸಕಾರಾತ್ಮಕವಾಗಿದ್ದರೇ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (ಯುಪಿಎಸ್‌ಸಿ) ತೃತೀಯ ಲಿಂಗಿಗಳನ್ನು ನೇಮಕಾತಿ ಪರೀಕ್ಷೆಯ ಅರ್ಜಿ ನಮೂನೆಗಳಲ್ಲಿ ಮೂರನೇ ಲಿಂಗವಾಗಿ ಸೇರಿಸಿಕೊಳ್ಳುತ್ತದೆ.








