ಭಾರತೀಯ ನೌಕಾಪಡೆಯ ತರಬೇತಿ ನಿರತ ಮಿಗ್-29ಕೆ ಫೈಟರ್ ಜೆಟ್ ಇಂದು ಬೆಳಗ್ಗೆ ಗೋವಾದ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದೆ. ಅದೃಷ್ಟವಶಾತ್ ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ.
ಗೋವಾದ ವಾಸ್ಕೋದ ಐಎನ್‍ಎಸ್-ಹಂಸ ನೌಕಾ ನೆಲೆಯಿಂದ ಎಂದಿನಂತೆ ತರಬೇತಿಗಾಗಿ ಮೇಲೇರಿದ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ದೋಷ ಸರಿಪಡಿಸಬೇಕು ಎನ್ನುವಷ್ಟರಲ್ಲಿ ಪೈಲೆಟ್ ನಿಯಂತ್ರಣ ತಪ್ಪಿದ್ದ ಮಿಗ್ ಸಮುದ್ರಕ್ಕೆ ಬಿದ್ದು ಪತನವಾಗಿದೆ.
ಇನ್ನು, ಜೆಟ್ ವಿಮಾನ ಸಾಗರದೊಳಗೆ ಪತನಗೊಳ್ಳುವುದಕ್ಕೂ ಮುನ್ನ ಎಚ್ಚೆತ್ತ ಪೈಲೆಟ್ ಸುರಕ್ಷಿತವಾಗಿ ಹೊರಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ನೌಕಾಪಡೆಯ ಉನ್ನತಾಧಿಕಾರಿಯೊಬ್ಬರು ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.








