ಪರಿಸರಕ್ಕೆ ಹಾನಿವುಂಟು ಮಾಡುವ ಪೆಟ್ರೋಲ್, ಡೀಸೆಲ್ ಬಳಕೆಯ ಬದಲಿಗೆ ಪರ್ಯಾಯವಾದ ಸಂಪನ್ಮೂಲಗಳನ್ನು ಇಡೀ ಜಗತ್ತು ಹುಡುಕುತ್ತಿದೆ. ಇತ್ತೀಚೆಗೆ ಭಾರತ ಇಂಧನ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಇದರ ಬೆನ್ನಲ್ಲೇ ಶುಭಸುದ್ದಿಯೊಂದು ಹೊರಬಿದ್ದಿದೆ.

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಬಳಕೆಯಾಗುವ ಲೀಥಿಯಂ ಲೋಹದ ನಿಕ್ಷೇಪವೊಂದು ನಮ್ಮ ರಾಜ್ಯದಲ್ಲೆ ಪತ್ತೆಯಾಗಿದೆ ಎಂದು ‘ದಿ ಇಕಾನಮಿಕ್ ಟೈಮ್ಸ್’ ಸುದ್ದಿ ಪತ್ರಿಕೆ ವರದಿಯೊಂದನ್ನ ಪ್ರಕಟಿಸಿದೆ.
ಈ ಬೃಹತ್ ಲೀಥಿಯಂ ನಿಕ್ಷೇಪ ಸಕ್ಕರೆನಾಡು ಮಂಡ್ಯದಲ್ಲಿ ಪತ್ತೆಯಾಗಿದೆ. ಮಂಡ್ಯದಲ್ಲಿ ಸುಮಾರು 14100 ಟನ್‌ನಷ್ಟು ಲೋಹ ತೆಗೆಯಬಹುದು ಎಂದು ಪರಮಾಣು ಶಕ್ತಿ ಆಯೋಗದ ಅಂಗ ಸಂಸ್ಥೆಯಾದ ಪರಮಾಣು ಖನಿಜ ನಿರ್ದೇಶನಾಲಯ ತಿಳಿಸಿದೆ.
ಸಂಶೋಧಕರ ಅಧ್ಯಯನದ ಪ್ರಕಾರ ಮಂಡ್ಯದ 0.5 ಚದರ ಕಿ.ಮೀ ಜಾಗದಲ್ಲಿ 30300 ಟನ್ ಲೀಥಿಯಂ ಅದಿರು ಪತ್ತೆಯಾಗಿದೆ ಎಂದು ತಿಳಿಸಿದೆ. .ಅದರಲ್ಲಿ 14100 ಟನ್ ಲೀಥಿಯಂ ಲೋಹ ತೆಗೆಯಬಹುದು ಎಂದು ಬ್ಯಾಟರಿ ತಂತ್ರಜ್ಞಾನ ತಜ್ಞರೂ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಪ್ರೊಫೆಸರ್ ಆಗಿರುವ ಮುನಿಚಂದ್ರಯ್ಯ ತಿಳಿಸಿದ್ದಾರೆ.
ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಇದು ತೀರ ಪ್ರಮಾಣ ಕಡಿಮೆ ಪ್ರಮಾಣದ್ದಾಗಿದೆ. ಲೀಥಿಯಂ ಶೋಧಕ್ಕೆ ಸಂಬಂಧಪಟ್ಟಂತೆ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ತಜ್ಞತಂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.








